ನ್ಯೂಜೆರ್ಸಿ: ಆಂಧ್ರ ಮೂಲದ ಮಹಿಳಾ ಟೆಕ್ಕಿ ಮತ್ತು ಆಕೆಯ 7 ವರ್ಷದ ಪುತ್ರ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮನೆಯಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು 38 ವರ್ಷದ ಎನ್ ಶಶಿಕಲಾ ಎಂದು ಗುರುತಿಸಲಾಗಿದೆ. ಶಶಿಕಲಾ ಮತ್ತು ಅವರ ಮಗನನ್ನು ಚೂರಿಯಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ವೇಳೆ ತಾಯಿ ಮಗ ಇಬ್ಬರೂ ಕೊಲೆಯಾಗಿರೋದು ಗೊತ್ತಾಯಿತು ಅಂತಾ ಶಶಿಕಲಾ ಪತಿ ಹನುಮಂತ್ ರಾವ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
Advertisement
Advertisement
ಈ ಬಗ್ಗೆ ಹೇಳಿಕೆ ನೀಡಿರೋ ಇಂಡೋ-ಅಮೆರಿಕನ್ ಸಮುದಾಯದ ಮುಖ್ಯಸ್ಥ ಪ್ರಸಾದ್ ತೊಟಕುರ, ಹನುಮಂತರಾವ್ ಅವರು ತನ್ನ ಹೆಂಡತಿ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನ ನೋಡಿದ್ದರು. ಇಬ್ಬರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಆದ್ರೆ ಭಾರತದಲ್ಲಿರುವ ಶಶಿಕಲಾ ತಾಯಿ ಕೃಷ್ಣ ಕುಮಾರಿ, ಅಮೆರಿಕದಲ್ಲಿ ನನ್ನ ಅಳಿಯನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಹನುಮಂತ್ ರಾವ್ ಹಾಗೂ ಶಶಿಕಲಾ ಇಬ್ಬರೂ ಸಾಫ್ಟ್‍ವೇರ್ ಉದ್ಯೋಗಿಗಳಾಗಿದ್ದು, ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಶಶಿಕಲಾ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಎಂದಿನಂತೆ ಸಂಜೆ ಶಾಲೆಗೆ ಹೋದ ಮಗನನ್ನು ಕರೆದುಕೊಂಡು ಮನೆಗೆ ಬಂದಿದ್ದರು.
ಇನ್ನು ಈ ಪ್ರಕರಣ ಸಂಬಂಧ ಆಂಧ್ರದ ಸಂಸತ್ತಿನಲ್ಲಿ ಶುಕ್ರವಾರ ಚರ್ಚೆ ನಡೆದಿದೆ. ಇದು ತುಂಬಾ ಅಪಾಯಕಾರಿಯಾದುದು. ಎರಡು ವಾರಗಳ ಹಿಂದೆಯಷ್ಟೇ ಇಬ್ಬರು ಭಾರತೀಯರ ಕೊಲೆಯಾಗಿದ್ದು, ಇದೀಗ ಮತ್ತಿಬ್ಬರು ಭಾರತೀಯರ ಹತ್ಯೆಯಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆ ಈ ಬಗ್ಗೆ ಮಾತನಾಡಬೇಕು ಅಂತ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಟಿ ಸುಬ್ಬರಾಮಿ ರೆಡ್ಡಿ ಹೇಳಿದ್ದಾರೆ.
ಇನ್ನು ಈ ಕೃತ್ಯ ಜನಾಂಗೀಯ ದ್ವೇಷದಿಂದ ನಡೆದಿರಬಹುದು ಎಂಬ ವಿಷಯವನ್ನ ಅಮೆರಿಕದ ಪೊಲೀಸ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಅವರು ಭಾರತೀಯರು ಎಂಬ ಕಾರಣಕ್ಕೆ ಜನಾಂಗೀಯ ದ್ವೇಷದಿಂದ ಕೊಲೆ ನಡೆದಿದೆ ಎಂದು ಹೇಳಲು ಯಾವುದೇ ಆಧಾರವಿಲ್ಲ ಎಂದಿದ್ದಾರೆ.