ಆಂಧ್ರದಲ್ಲಿ YSRP ನಾಯಕ ವಲ್ಲಭನೇನಿ ವಂಶಿ ಮನೆ ಮೇಲೆ ಕಲ್ಲು ತೂರಾಟ

Public TV
1 Min Read
Vallabhaneni Vamsi

ಅಮರಾವತಿ: ವೈಎಸ್‌ಆರ್‌ಸಿಪಿ ನಾಯಕ ವಲ್ಲಭನೇನಿ ವಂಶಿ (Vallabhaneni Vamsi) ಅವರ ಮನೆ ಮೇಲೆ ತೆಲುಗು ದೇಶಂ ಪಾರ್ಟಿ (TDP) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ವಿಜಯವಾಡದಲ್ಲಿ ವಂಶಿ ವಾಸವಿರುವ ಅಪಾರ್ಟ್‌ಮೆಂಟ್‌ನ ಸುತ್ತಲೂ ಟಿಡಿಪಿ ಬೆಂಬಲಿಗರು ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕೂಡ ಪುಡಿಗೈದಿದ್ದಾರೆ.

ನಾಲ್ಕು ಕಾರುಗಳಲ್ಲಿ ಆಗಮಿಸಿದ ಟಿಡಿಪಿ ಕಾರ್ಯಕರ್ತರು ಮೊದಲು ವಂಶಿ ನಿವಾಸದ ಮುಂದೆ ಘೋಷಣೆಗಳನ್ನು ಕೂಗಿದರು. ಅಲ್ಲದೇ ವಂಶಿ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಗೇಟು ಒಡೆಯಲು ಯತ್ನಿಸಿದ್ದಾರೆ. ಯುವಕರು ದೊಣ್ಣೆ ಮತ್ತು ಕಲ್ಲುಗಳೊಂದಿಗೆ ಆಗಮಿಸಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿ ಟಿಡಿಪಿ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳಿಂದ ಬಾಲಕನ ಗಂಟಲಲ್ಲಿ ಸಿಲುಕಿದ್ದ ನಾಣ್ಯ ಹೊರ ತೆಗೆದ ವೈದ್ಯರು

ಇತ್ತೀಚೆಗಷ್ಟೇ ಮಾಜಿ ಸಚಿವ ಕೊಡಲಿ ನಾಣಿ ನಿವಾಸದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಅಪರಿಚಿತರು ನಾನಿ ಮನೆ ಮೇಲೆ ಕಲ್ಲು, ಮೊಟ್ಟೆ ಎಸೆದಿದ್ದರು. ಅಲ್ಲದೇ ಮನೆಗೆ ನುಗ್ಗುವ ಯತ್ನ ಕೂಡ ನಡೆದಿತ್ತು. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪರಿಚಿತರನ್ನು ಕಳುಹಿಸಲು ಯತ್ನಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು.

ಒಟ್ಟಿನಲ್ಲಿ ಆಂಧ್ರದಲ್ಲಿ ಚುನಾವಣಾ ಕಾವು ಮುಂದುವರೆದಿದೆ. ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಹಲವೆಡೆ ರಾಜಕೀಯ ದಾಳಿ ಮುಂದುವರಿದಿದೆ. ಚುನಾವಣೆಯ ಸಂದರ್ಭದಲ್ಲಿನ ರಾಜಕೀಯ ಸವಾಲುಗಳು, ಪ್ರತಿ ಸವಾಲುಗಳು ಈಗ ಟೆನ್ಶನ್ ಉಂಟು ಮಾಡುತ್ತಿವೆ. ಅಂದು ಟಿಡಿಪಿ ಮೇಲೆ ಕೊಡಲಿ ನಾನಿ, ವಲ್ಲಭನೇನಿ ವಂಶಿ ಸಿಡಿದೆದ್ದಿದ್ದು, ಇದೀಗ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ವಂಶಿ ಮನೆಯಲ್ಲಿ ಟಿಡಿಪಿ ಕಾರ್ಯಕರ್ತರು ಗಲಾಟೆ ಕೂಡ ಮಾಡಿದ್ದರು.

Share This Article