ಬದ್ರುದ್ದೀನ್ ಕೆ ಮಾಣಿ
ಚಿಂತಕರ ಚಾವಡಿ, ಹಿರಿಯರ ಮನೆ ಎಂದೇ ಕರೆಯಲ್ಪಡುವ `ಮೇಲ್ಮನೆ’ ಅಂದ್ರೆ `ವಿಧಾನಪರಿಷತ್’ನ ಅಗತ್ಯ ಕರ್ನಾಟಕದಲ್ಲಿ ಇದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ ಆಂಧ್ರಪ್ರದೇಶ ಸರ್ಕಾರದ ನಿರ್ಧಾರ. ಅಲ್ಲಿನ ವಿಧಾನಪರಿಷತ್ ರದ್ದುಗೊಳಿಸಬೇಕೆಂಬ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಣಯ ಹಲವು ರೀತಿಯ ಚರ್ಚೆಗಳಿಗೆ ಅವಕಾಶ ಕಲ್ಪಿಸಿದೆ. ಜನರಿಂದ ನೇರವಾಗಿ ಚುನಾಯಿತರಾಗುವ ವಿಧಾನಸಭೆಗೆ ಪರ್ಯಾಯವಾಗಿ, ಪರೋಕ್ಷವಾಗಿ ಅಧಿಕಾರದ ಸದನ ವಿಧಾನಪರಿಷತ್ ಅನ್ನೋದು ಗೊತ್ತಿರುವ ವಿಷಯ. ವಿಧಾನಸಭೆ ಕೈಗೊಳ್ಳುವ ನಿರ್ಣಯಗಳು, ಅನುಮೋದಿಸುವ ವಿಧೇಯಕಗಳನ್ನು ಮತ್ತೊಮ್ಮೆ ಪರಾಮರ್ಶಿಸುವ ಸಲುವಾಗಿ ರಚನೆಗೊಂಡಿರುವ ಸದನವಿದು. ವಿವಿಧ ಕ್ಷೇತ್ರಗಳ ಸಾಧಕರು, ಪರಿಣತರು, ತಜ್ಞರನ್ನು ಒಳಗೊಂಡ ಚಿಂತಕರ ಚಾವಡಿ, ಹಿರಿಯರ ಮನೆಯೆಂದೇ ಕರೆಯಲ್ಪಡುವ ಮೇಲ್ಮನೆ, ಇತ್ತೀಚೆಗೆ ರಾಜಕಾರಣಿಗಳ ಪುನರ್ವಸತಿ ಕೇಂದ್ರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿದೆ. `ಬಿಳಿ ಆನೆ’ಯಾಗಿರುವ ಈ ಸದನದ ಔಚಿತ್ಯದ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದ್ದೂ ಇದೆ. ಬಹುತೇಕ ಸಂದರ್ಭ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತವಿಲ್ಲದೇ ಇರಿಸು-ಮುರಿಸು ಉಂಟಾದಾಗ ಮಾತ್ರ ಪರಿಷತ್ ಅಗತ್ಯತೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಆ ಕೂಗಿಗೆ ಸೂಕ್ತ ಬೆಂಬಲ ಸಿಗದೆ ಈ ವಿಷಯ ಅಲ್ಲೇ ನಿಂತು ಹೋಗುತ್ತಿತ್ತು. ನೆರೆಯ ಆಂಧ್ರಪ್ರದೇಶ ಸರ್ಕಾರದ `ರದ್ದು’ ನಿರ್ಧಾರ ಮತ್ತೊಮ್ಮೆ ಈ ಚರ್ಚೆಗೆ ಅವಕಾಶ ಕಲ್ಪಿಸಿದೆ.
Advertisement
ಆಂಧ್ರದಲ್ಲಿ `ವಿಧಾನಪರಿಷತ್’ ರದ್ದಾಗುವುದು ಇದೇ ಮೊದಲಲ್ಲ. 1958ರಿಂದ 1985ರವರೆಗೆ ಅಲ್ಲಿ ಅಸ್ತಿತ್ವದಲ್ಲಿದ್ದ ಪರಿಷತ್, ಅಂದಿನ ರಾಜಕೀಯ ಮೇಲಾಟಗಳಿಗಾಗಿ ರದ್ದಾಗಿತ್ತು. ಆದರೆ ಮತ್ತೆ ವಿಧಾನಪರಿಷತ್ ಅಸ್ತಿತ್ವಕ್ಕೆ ತರುವ ಪ್ರಯತ್ನ ಕೇವಲ 5 ವರ್ಷಗಳಲ್ಲಿ ಆರಂಭವಾಯಿತಾದರೂ, ಅದು ಕೈಗೂಡಲು ಮತ್ತೆ 17 ವರ್ಷಗಳು ಬೇಕಾಯಿತು. ಆಂಧ್ರ ಶಾಸನ ಸಭೆಯಲ್ಲಿ 1990ರಲ್ಲೇ ಮತ್ತೆ ಪರಿಷತ್ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತಾದರೂ, ಅದು ಕೈಗೂಡಲು 2007ರವರೆಗೂ ಕಾಯಬೇಕಾಯಿತು. ಯಾಕೆಂದರೆ 1990ರಲ್ಲಿ ಆಂಧ್ರ ವಿಧಾನಸಭೆ ನಿರ್ಣಯಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿತಾದರೂ, ಲೋಕಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. 1991ರಿಂದ ನಡೆದ ಕೆಲವು ರಾಜಕೀಯ ವಿದ್ಯಮಾನಗಳಿಂದಾಗಿ ಆಂಧ್ರದ ಕೋರಿಗೆ ಮನ್ನಣೆ ಸಿಗಲೇ ಇಲ್ಲ. 2004ರಲ್ಲಿ ಮತ್ತೆ ನಿರ್ಣಯ ಕೈಗೊಂಡ ಆಂಧ್ರ ಸರ್ಕಾರ, 2006ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 2 ಸದನಗಳಲ್ಲಿ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗಾಗಿ 2007ರಲ್ಲಿ ಮತ್ತೆ ಅಸ್ತಿತ್ವಕ್ಕೆ ಬಂದ ಆಂಧ್ರ ವಿಧಾನಪರಿಷತ್ ಈವರೆಗೂ ಕಾರ್ಯನಿರ್ವಹಿಸುತ್ತಿದೆ.
Advertisement
Advertisement
ಇತ್ತೀಚೆಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನೇರಿದ ವೈಎಸ್‍ಆರ್ ಪಕ್ಷದ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಅಲ್ಲಿನ ವಿಧಾನಪರಿಷತ್‍ನಲ್ಲಿ ಬಹುಮತವಿಲ್ಲ. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ವಿಧೇಯಕಗಳನ್ನು ತೆಲುಗುದೇಶಂ ಪಕ್ಷದ ಬಹುಮತವಿರುವ ಪರಿಷತ್ ತಿರಸ್ಕರಿಸಿತ್ತು. ಇದರಿಂದ ಕೆರಳಿದ ಸಿಎಂ ಜಗನ್ಮೋಹನ ರೆಡ್ಡಿ ವಿಧಾನಪರಿಷತ್ ಅನ್ನೇ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಆರ್ಥಿಕ ಹೊರೆ. ಆದರೆ ಈ ನಿರ್ಣಯಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಅನುಮೋದನೆ ಬೇಕು. ಅದಾದ ಬಳಿಕವಷ್ಟೇ ವಿಧಾನಪರಿಷತ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
Advertisement
ಆದರೆ, ಕರ್ನಾಟಕದ ವಿಧಾನಪರಿಷತ್‍ಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಅದು ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ರಚಿಸಲ್ಪಟ್ಟ ಮೇಲ್ಮನೆ. ರಾಜಾಡಳಿತ ಇರುವಾಗಲೇ ಜನರೊಂದಿಗೆ ನೇರವಾಗಿ ಹೊಂದಿಕೊಂಡಿರುವ ಅನುಭವಿಗಳ ಸದನವನ್ನು ರಚಿಸಿ, ರಾಜರಿಗೆ ಸಲಹೆ ನೀಡುವ ಪದ್ಧತಿ ತರಲಾಯಿತು. 1907ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ವ್ಯವಸ್ಥೆಯನ್ನು ಜಾರಿಗೆ ತಂದರು. 10ಕ್ಕಿಂತ ಕಡಿಮೆಯಿಲ್ಲದೇ 15ಕ್ಕಿಂತ ಹೆಚ್ಚಿರದ ಸದಸ್ಯರನ್ನು ಒಳಗೊಂಡ ಮೇಲ್ಮನೆಯನ್ನು ಅಸ್ತಿತ್ವಕ್ಕೆ ತಂದರು. ಅದರಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು, ಪರಿಣತರು, ಸಮಾಜ ಸುಧಾರಕರು ಇರುತ್ತಿದ್ದರು. ಕಾಲಕ್ರಮೇಣ ಸ್ವಾತಂತ್ರ್ಯ ಸಿಗುವ ವೇಳೆಗೆ ನಾಮನಿರ್ದೇಶಿತ, ಚುನಾಯಿತ ಅಧಿಕಾರೇತರ ಮೇಲ್ಮನೆ ಸದಸ್ಯರ ಸಂಖ್ಯೆ 50 ತಲುಪಿತ್ತು. ಮೈಸೂರು ವಿಧಾನಪರಿಷತ್ ಅಂತಲೇ ಅಸ್ತಿತ್ವದಲ್ಲಿದ್ದ ಈ `ಚಿಂತಕರ ಚಾವಡಿ’ಯ ಸದಸ್ಯರ ಸಂಖ್ಯೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದಾಗ 63ರ ಸದನವಾಗಿತ್ತು. 1987ರಲ್ಲಿ ಕರ್ನಾಟಕ ವಿಧಾನಪರಿಷತ್‍ನ ಸಂಖ್ಯೆ 75ಕ್ಕೇರಿತು.
ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆ ಮೂರನೇ ಒಂದರಷ್ಟಕ್ಕಿಂತ `ಪರಿಷತ್’ ಸದಸ್ಯರ ಸಂಖ್ಯೆ ಮೀರಬಾರದೆಂಬ ನಿಯಮದಂತೆ ಗರಿಷ್ಟ 75 ಸದಸ್ಯರನ್ನು ಒಳಗೊಂಡಿದೆ ನಮ್ಮ ಮೇಲ್ಮನೆ. ಇಲ್ಲಿ 25 ಸದಸ್ಯರನ್ನು ವಿಧಾನಸಭೆ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇನ್ನು 25 ಸದಸ್ಯರು ಸ್ಥಳೀಯ ಸಂಸ್ಥೆಗಳ ಮೂಲಕ (ಗ್ರಾ.ಪಂ, ತಾ.ಪಂ, ಜಿ.ಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಪಾಲಿಕೆ ಸದಸ್ಯರು) ಚುನಾಯಿಸಲಾಗುತ್ತೆ. 7 ಸದಸ್ಯರು ಪದವೀಧರ ಕ್ಷೇತ್ರದಿಂದ, 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 11 ಸದಸ್ಯರನ್ನು ಅಧಿಕಾರದಲ್ಲಿರುವ ಸರ್ಕಾರಗಳು ನಾಮನಿರ್ದೇಶನ ಮಾಡುತ್ತವೆ. ನಾಮನಿರ್ದೇಶನಗೊಳ್ಳುವವರು ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ತಜ್ಞರು, ಸಾಹಿತಿಗಳು, ಕಲಾವಿದರು ಇರಬೇಕೆಂಬುದು ನಿಯಮ. ಆದರೆ ಇತ್ತೀಚೆಗೆ ಇವರ್ಯಾರು ಮೇಲ್ಮನೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಅನ್ನೋದು ವಾಸ್ತವ.
ರಾಜಕೀಯ ಪಕ್ಷಗಳು ತಮ್ಮ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದಾಗ, ಅನಿವಾರ್ಯ ಸಂದರ್ಭದಲ್ಲಿ ಅಧಿಕಾರ ನೀಡಬೇಕಾದರೆ, ಬಂಡಾಯ ಶಮನ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ವಿಧಾನಪರಿಷತ್‍ಗೆ ಚುನಾಯಿಸುವುದು, ನಾಮನಿರ್ದೇಶನ ಮಾಡುವ ಪರಿಪಾಠ ಬಂದಿದೆ. ಸದನದ ಬಹುತೇಕ ಸದಸ್ಯರು ವಿವಿಧ ರಾಜಕೀಯ ಪಕ್ಷಗಳಿಂದ ಅಡ್ಜಸ್ಟ್ ಮೆಂಟ್ ಮೂಲಕ ಬಂದವರೇ ಆಗಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾಯಿಸುವ ಸಂದರ್ಭದಲ್ಲಿ `ಬಲಿಷ್ಠ’ರಾದವರೇ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಂಡಾಯವಾಗಿ, ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಸಭೆ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿಕೊಂಡು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವರು ಸದನ ಪ್ರವೇಶಿಸಿದ್ದೂ ಉಂಟು. ಇತ್ತಿಚೇಗೆ ಮೇಲ್ಮನೆ ಪ್ರವೇಶಿಸಲು ಕೋಟಿಗಟ್ಟಲೆ ದುಡ್ಡು ಚೆಲ್ಲುವ ಪರಿಪಾಠ ಆರಂಭವಾಗಿದೆ. ಹಲವು ನಾಯಕರು `ಸ್ಟೇಟಸ್’ಗೋಸ್ಕರ ಸದನದ ಸದಸ್ಯರಾಗಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ನಾಚುವಂತೆ ಹಣ-ಹೆಂಡದ ಪ್ರಭಾವ ನಡೆಯುವುದು ಸಾಮಾನ್ಯವಾಗಿದೆ.
ಪದವೀಧರರು ಮತ್ತು ಶಿಕ್ಷಕರು ಚುನಾಯಿಸುವ ಕ್ಷೇತ್ರಗಳ ಚುನಾವಣೆಯಂತೂ, ನಾವೆಲ್ಲಾ ತಲೆ ತಗ್ಗಿಸುವಂತೆ ನಡೆಯುತ್ತಿರುವುದು ನಾಚಿಕೆಗೇಡು. ನಾಮನಿರ್ದೇಶನಕ್ಕೆ ವಿವಿಧ ಕ್ಷೇತ್ರಗಳ ಸಾಧನೆ, ಪರಿಣತಿ ಲೆಕ್ಕಕ್ಕೇ ಬರುತ್ತಿಲ್ಲ. ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಮಾಜಸೇವಕರ ಹೆಸರಿನಲ್ಲಿ ಮತ್ತೆ ಅದೇ ರಾಜಕಾರಣಿಗಳು ಮೇಲ್ಮನೆ ಪ್ರವೇಶಿಸುತ್ತಾರೆ. ಹೀಗಾಗಿ, ಚಿಂತಕರ ಚಾವಡಿ, ಹಿರಿಯರ ಮನೆ ಎಂಬ ಹೆಗ್ಗಳಿಕೆಯ ಮೇಲ್ಮನೆ ಅರ್ಥ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮೇಲ್ಮನೆಯೂ ಗಂಭೀರತೆ ಕಳೆದುಕೊಳ್ಳುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಅಲ್ಲಿ ಉತ್ತಮ ಗುಣಮಟ್ಟದ ಚರ್ಚೆಗಳೂ ಆಗುತ್ತಿಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ. ಮಿತಿಮೀರಿದ ವರ್ತನೆ, ಪರಸ್ಪರ ಬೈದಾಟ, ಕಚ್ಚಾಟ, ಕಿತ್ತಾಟ, ಸರ್ವೆಸಾಮಾನ್ಯವಾಗಿ ಹೋಗಿ ಸದನದ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಭಾವನೆ ಮೂಡತೊಡಗಿದೆ.
ವಿಧಾನಸಭೆ ಸದಸ್ಯರ ಮಾದರಿಯಲ್ಲಿ ಎಲ್ಲಾ 75 ಸದಸ್ಯರಿಗೂ ವಾರ್ಷಿಕ ತಲಾ 2 ಕೋಟಿ ರೂಪಾಯಿ ವಿವೇಚನಾನುದಾನವನ್ನು ಸರ್ಕಾರ ನೀಡುತ್ತಿದೆ. ಅದಕ್ಕೆ ಒಟ್ಟು ವಾರ್ಷಿಕ 150 ಕೋಟಿ ರೂಪಾಯಿ ಮೀಸಲಿಡಬೇಕು. ಅದು ಜನರ ಕಲ್ಯಾಣಕ್ಕೆ ವ್ಯಯವಾಗುತ್ತದೆ ಎಂದೇ ಹೇಳೋಣ. ಆದರೆ ಸದನದ ಸದಸ್ಯರ ಖರ್ಚು, ವೆಚ್ಚ, ಸಂಬಳ, ಸಾರಿಗೆ, ಅದು-ಇದೂ ಭತ್ಯೆ ಅಂತಾ ಹೇಳಿ, ವರ್ಷಕ್ಕೆ ಕೋಟಿಗಟ್ಟಲೆ ಖರ್ಚಾಗುತ್ತಿದೆ. ಸದನ ನಡೆಸಲು ಕೂಡ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗುತ್ತಿದೆ. ಗುಣಮಟ್ಟದ ಚರ್ಚೆಗಳಾಗದೇ, ರಾಜ್ಯದ ಕಲ್ಯಾಣಕ್ಕಾಗಿ ಉಪಯುಕ್ತ ಕೊಡುಗೆ ನೀಡಲಾಗದ ಸದನದ ಅಗತ್ಯತೆ ಏನು ಅನ್ನೋ ಪ್ರಶ್ನೆ ಉದ್ಭವವಾಗುವುದು ಸಹಜ. ಯಾರನ್ನೋ ಮೆಚ್ಚಿಸಲು, ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಮೇಲಾಟಕ್ಕೆ ಜನರ ತೆರಿಗೆಯಿಂದ ನೂರಾರು ಕೋಟಿ ವ್ಯಯಿಸಿ ನಡೆಸುವ ಇಂತಹ ವ್ಯವಸ್ಥೆ ಬೇಕೆ..? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಹಾಗಂತ ನಮ್ಮ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಇಂತಹ ಸದನದ ಅನಿವಾರ್ಯತೆ ಏನೂ ಇಲ್ಲ. ದೇಶದ 6 ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಅಸ್ತಿತ್ವದಲ್ಲಿರೋದು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ವಿಧಾನಪರಿಷತ್ ಇದೆ. ಜಮ್ಮು-ಕಾಶ್ಮೀರದಲ್ಲೂ ಈ ಸದನ ಇತ್ತೀಚೆಗೆ ಅಸ್ತಿತ್ವ ಕಳೆದುಕೊಂಡಿದೆ. ಮೌಲ್ಯ ಕಳೆದುಕೊಳ್ಳುತ್ತಿರುವ `ವಿಧಾನಪರಿಷತ್’ ಬೇಕೇ..? ಅಥವಾ ಹಿರಿಯರ ಮನೆ ಎಂದು ಕರೆಸಿಕೊಳ್ಳುವ `ಮೇಲ್ಮನೆ’ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾಯಿಸಿಕೊಂಡು ಅಸ್ತಿತ್ವದಲ್ಲಿರಬೇಕೇ ಎಂಬುದು ನಮ್ಮ ಮುಂದಿನ ಆಯ್ಕೆ. ನಿಜ, ಅನೇಕ ಗಣ್ಯಾತಿಗಣ್ಯರು, ಸಮಾಜಸುಧಾರಕರು, ತಜ್ಞರು, ಸಾಧಕರು ಪ್ರತಿನಿಧಿಸಿ ನಮ್ಮ ವ್ಯವಸ್ಥೆ ಸುಧಾರಣೆಗೆ ಅಪಾರ ಕೊಡುಗೆ ನೀಡಲು ಕಾರಣೀಭೂತವಾಗಿರುವ `ಚಿಂತಕರ ಚಾವಡಿ’ ಮುಂದುವರಿಯಬೇಕಾದರೆ, ಅದರ ಗೌರವ ಉಳಿಯಬೇಕಾದರೆ ಬದಲಾವಣೆ ಅಗತ್ಯ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಅನ್ನೋದೇ ಪ್ರಶ್ನೆ..?