ಅಮರಾವತಿ: ಕ್ಲಾಸ್ ನಡೆಯುತ್ತಿದ್ದಾಗಲೇ ತರಗತಿಯಿಂದ ಹೊರನಡೆದು ಮೂರನೇ ಮಹಡಿಯಿಂದ ಜಿಗಿದು 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅನಂತಪುರದ ನಾರಾಯಣ ಕಾಲೇಜಿನ ವಿದ್ಯಾರ್ಥಿ ಬೆಳಗ್ಗೆ 10:15 ಕ್ಕೆ ತನ್ನ ಚಪ್ಪಲಿಗಳನ್ನು ತೆಗೆದು ತರಗತಿಯಿಂದ ಹೊರಬಂದ. ನೇರವಾಗಿ ಕಟ್ಟೆಯ ಬಳಿಗೆ ನಡೆದು, ಅದನ್ನು ಹತ್ತಿ ಹಠಾತ್ ಜಿಗಿದಿದ್ದಾನೆ.
ತರಗತಿ ನಡೆಯುತ್ತಿರುವಾಗ ಹುಡುಗ ಕೊಠಡಿಯಿಂದ ಹೊರಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದು. ಅವನು ಜಿಗಿದ ನಂತರ, ಸಹಪಾಠಿಗಳು ಏನಾಯಿತು ಎಂದು ನೋಡಲು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಗುರುವಾರ ಬೆಳಗ್ಗೆ ರಜೆಯ ನಂತರ ಬಾಲಕ ಕಾಲೇಜಿಗೆ ಮರಳಿದ್ದ ಎಂದು ಪೊಲೀಸ್ ಅಧಿಕಾರಿ ಟಿ ವೆಂಕಟೇಶುಲು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಕುರಿತು ಮೃತ ಬಾಲಕನ ತಂದೆ ಪ್ರತಿಕ್ರಿಯೆ ನೀಡಿದ್ದು, ಶುಲ್ಕ ಪಾವತಿಸದ ಬಗ್ಗೆ ಕಾಲೇಜಿನವರು ನನ್ನ ಮಗನನ್ನು ಕೇಳಿದ್ದಾರೆ ಅನಿಸುತ್ತೆ. ನಿಖರವಾಗಿ ಏನಾಯಿತು ಎಂದು ನನಗೂ ಖಚಿತವಿಲ್ಲ ಎಂದು ದುಃಖಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.