– ಅಸ್ವಸ್ಥರ ಚಿಕಿತ್ಸಾ ವೆಚ್ಚ ಭರಿಸುತ್ತಿರುವ ಸರ್ಕಾರ
ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಜರುಗಿದ ಅನಿಲ ಸೋರಿಕೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವುದಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ.
ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದರಿಂದ 13 ಜನ ಸಾವನ್ನಪ್ಪಿದರೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಜನ ಅಸ್ವಸ್ಥರಾಗಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬಂದ ಜಗನ್ ಮೋಹನ್ ರೆಡ್ಡಿ, ಅಸ್ವಸ್ಥರದವರ ಬಳಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಜೊತೆಗೆ ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ಹಾಗೂ ತೀವ್ರ ಅಸ್ವಸ್ಥರದವರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು. ಜೊತೆಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ 1 ಲಕ್ಷ, ಈಗಾಗಲೇ ಚಿಕಿತ್ಸೆ ಪಡೆದು ಹೋದವರಿಗೆ 25 ಸಾವಿರ ನೀಡುವುದಾಗಿ ಜಗನ್ ತಿಳಿಸಿದ್ದಾರೆ.
ಇದಾದ ನಂತರ ಈ ವಿಚಾರವಾಗಿ ಉನ್ನತ ಅಧಿಕಾರಿಗಳ ಜೊತೆ ಸಭೆ ಮಾಡಿದ ಜಗನ್ ಮೋಹನ್ ರೆಡ್ಡಿ, ಚಿಕಿತ್ಸೆ ಪಡೆಯುತ್ತಿರುವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಈ ಸಭೆಯಲ್ಲಿ ಈ ದುರಂತಕ್ಕೆ ಏನೂ ಕಾರಣ ಎಂದು ತಿಳಿಯಲು ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಮುಂಜಾನೆ ಸುಮಾರು 2.30ಕ್ಕೆ ಗ್ಯಾಸ್ ಲೀಕ್ ಆಗಿದ್ದು, ಬೆಳಗ್ಗೆ 5.30ಕ್ಕೆ ವಿಷಯ ತಿಳಿದು ಬಂದಿದೆ.
ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಕಾರ್ಖಾನೆಯ ಮೂರು ಕಿ.ಮೀ ಅಂತರದಲ್ಲಿ ಇರುವ ಎಲ್ಲಾ ಜನರನ್ನು ಸ್ಥಳಾಂತರ ಮಾಡಿದ್ದೇವೆ ಎಂದು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಹಾಗೂ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ ಪಾಲಿಕೆ ಮನವಿ ಮಾಡಿಕೊಂಡಿತ್ತು.