– ಹರಕೆ ಸುತ್ತ ಅನುಮಾನದ ಹುತ್ತ
ಕೋಲಾರ: ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿರುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಗಮ್ಮನ ಹರಿಕೆ ತೀರಿಸಿದ್ದಾರೆ.
ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಸ್ವಕ್ಷೇತ್ರ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಚಂದ್ರಬಾಬು ನಾಯ್ಡು ಕಾಣಿಸಿಕೊಂಡಿದ್ದಾರೆ. ನಾಯ್ಡು ಅವರು ಪತ್ನಿ ಸಮೇತ ಇಂದು ಕುಪ್ಪಂನಲ್ಲಿರುವ ತಿರುಪತಿ ಗಂಗಮ್ಮ ದೇವಿಯ ದರ್ಶನ ಪಡೆದರು. ಬಳಿಕ ದೇವಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ್ದಾರೆ.
ಪ್ರತಿ ಬಾರಿಯೂ ಚಂದ್ರಬಾಬು ನಾಯ್ಡು ದಂಪತಿ ಗಂಗಮ್ಮನ ದರ್ಶನ ಪಡೆದು ಹರಕೆ ತೀರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ಹರಕೆ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಚಂದ್ರಬಾಬು ನಾಯ್ಡು ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರಿಗೂ ಈ ಭಯ ಶುರುವಾಗಿದೆ ಎಂದು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಬಹುಮತ ಸಿಗದೇ ಅಧಿಕಾರ ಕಳೆದುಕೊಳ್ಳುವ ಭೀತಿ ಚಂದ್ರಬಾಬು ನಾಯ್ಡು ಅವರಿಗೆ ಎದುರಾಗಿದೆ. ಆಂಧ್ರಪ್ರದೇಶದಲ್ಲಿ 176 ವಿಧಾನಸಭಾ ಕ್ಷೇತ್ರಗಳಿದ್ದು, 2014ರ ಚುನಾವಣೆಯಲ್ಲಿ ಟಿಡಿಪಿ 103 ಹಾಗೂ ವೈಎಸ್‍ಆರ್ ಸಿಪಿ 66 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಉಳಿದಂತೆ ಬಿಜೆಪಿ 4, ನವೋದಯ ಹಾಗೂ ಪಕ್ಷೇತರ ತಲಾ 1 ಸ್ಥಾನ ಪಡೆದುಕೊಂಡಿತ್ತು.