ಕೊಪ್ಪಳ ಮೈತ್ರಿ ಅಭ್ಯರ್ಥಿ ಪರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ – ಅಭ್ಯರ್ಥಿಯೇ ಸಮಾವೇಶಕ್ಕೆ ಗೈರು

Public TV
1 Min Read
KPL NAIDU

ಕೊಪ್ಪಳ: ಲೋಕಸಭಾ ಚುನಾವಣೆಯ ಎರಡನೇ ಹಂತದ ಕ್ಷೇತ್ರಗಳಿಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಚಂದ್ರಬಾಬು ನಾಯ್ಡು ಮತಯಾಚನೆ ಮಾಡಿದರು. ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಆಂಧ್ರ ಮೂಲದವರ ಮತಗಳಿವೆ. ಈ ಹಿನ್ನಲೆಯಲ್ಲಿ ಆಂಧ್ರ ಮೂಲದವರ ಮತಗಳನ್ನು ಸೆಳೆಯುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಕರೆತರಲಾಗಿತ್ತು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಆಂಧ್ರಪ್ರದೇಶದ ಮೂಲದವರು ಭಾಗವಹಿಸಿದ್ದರು.

KPL 1

ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಪ್ರಚಾರ ಮಾಡುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗೈರಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಂಡರೆ ಚುನಾವಣಾ ವೆಚ್ಚದಲ್ಲಿ ಈ ಮೊತ್ತವನ್ನು ಸೇರಿಸುತ್ತಾರೆ ಎಂಬ ಕಾರಣದಿಂದ ಅವರು ಗೈರಾಗಿದ್ದರು ಎನ್ನಲಾಗಿದೆ.

ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಕನ್ನಡ ಭಾಷೆಯೊಂದಿಗೆ ಮಾತು ಆರಂಭಿಸಿದರು. ಆ ಬಳಿಕ ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಜೊತೆಗೆ ಮೋದಿಯನ್ನು ಸೋಲಿಸಿ ಗುಜರಾತಿಗೆ ಓಡಿಸಿ ಎಂದು ಕರೆ ನೀಡಿದರು. ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳನ್ನು ಬಿಜೆಪಿಯಿಂದ ರಕ್ಷಿಸಬೇಕಾಗಿದೆ. ಅದಕ್ಕೆ ಇಂದು ನಾನು ಆಗಮಿಸಿದ್ದೇನೆ. ಮೋದಿ ದೇಶದ ಜನರಿಗೆ ಮಾಡಿರುವ ಮೋಸವನ್ನು ತಿಳಿಸಲು ಬಂದಿದ್ದೇನೆ. ಆಂಧ್ರಪ್ರದೇಶದಲ್ಲಿ ಅಮರಾವತಿಯನ್ನು ಅಭಿವೃದ್ಧಿ ಮಾಡಿದಂತೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡಬೇಕಿದೆ. ಮಹಾತ್ಮಗಾಂಧಿ ಹುಟ್ಟಿದ ಊರಿನಲ್ಲಿ ಜನಿಸಿದ ಮೋದಿ ಸುಳ್ಳು ಹೇಳುತ್ತಿದ್ದಾರೆ. ಆದರೆ ಮಹಾತ್ಮ ಗಾಂಧಿ ಎಂದು ಸುಳ್ಳು ಹೇಳಿಲ್ಲ ಎಂದರು.

ತುಂಗಭದ್ರಾ ನದಿ ನೀರಿನ ಸಮಸ್ಯೆ ಕುರಿತು ಕರ್ನಾಟಕ ಸರ್ಕಾರದ ಜೊತೆಗಿದ್ದು ಮಾತನಾಡುತ್ತೇವೆ. ಈ ಬಾರಿ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಲ್ಲದೇ ಕರ್ನಾಟಕದಲ್ಲಿಯೂ ಬಿಜೆಪಿಯನ್ನು ಹೇಳಲು ಹೆಸರಿಲ್ಲದಂತೆ ಓಡಿಸಬೇಕು ಎಂದರು.

KPL

Share This Article
Leave a Comment

Leave a Reply

Your email address will not be published. Required fields are marked *