ಪಣಜಿ: ಬೀಚ್‍ಗೆ ತೆರಳಿದ್ದ ವೈದ್ಯೆಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಕ್ಕಿ ಕೊಚ್ಚಿ ಹೋಗಿರುವ ಘಟನೆ ಗೋವಾದಲ್ಲಿ ನಡೆದಿದೆ.
25 ವರ್ಷದ ರಮ್ಯಾಕೃಷ್ಣ ಸಾವನ್ನಪ್ಪಿದ ಯುವತಿಯಾಗಿದ್ದು, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೂಲದವರಾಗಿದ್ದಾರೆ.
ರಮ್ಯಾಕೃಷ್ಣ ತಮ್ಮ ಮೂವರು ಗೆಳತಿಯರೊಂದಿಗೆ ಗೋವಾ ಬೀಚ್‍ಗೆ ತೆರಳಿದ್ದು, ಸಮುದ್ರದ ಬಳಿ ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಂತದಲ್ಲಿ ಭಾರೀ ಗಾತ್ರದ ಅಲೆ ದಡಕ್ಕೆ ಅಪ್ಪಳಿಸಿದ್ದು, ಕೂಡಲೇ ಮೂವರು ಗೆಳತಿಯರು ಅಲೆಯೊಂದಿಗೆ ಸಮುದ್ರಕ್ಕೆ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವತಿಯರು ದಡಕ್ಕೆ ಮರಳಿ ಬರಲು ಯಶಸ್ವಿಯಾದರೆ ರಮ್ಯಾಕೃಷ್ಣ ಮಾತ್ರ ಕಾಣೆಯಾಗಿದ್ದರು.
ಕೂಡಲೇ ಯುವತಿಯರು ಗೆಳತಿಯನ್ನು ರಕ್ಷಣೆ ಮಾಡಲು ಸ್ಥಳೀಯರೊಂದಿಗೆ ಹುಡುಕಾಟದ ಪ್ರಯತ್ನ ನಡೆಸಿದ್ದರು ರಮ್ಯಾಕೃಷ್ಣ ಕಾಣಿಸಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಅವರ ಮೃತದೇಹ ದಡಕ್ಕೆ ತೇಲಿ ಬಂದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ ನಗರದ ನಿವಾಸಿಯಾಗಿದ್ದ ರಮ್ಯಾಕೃಷ್ಣ ಅವರು ಎಂಬಿಬಿಎಸ್ ಪೂರ್ಣಗೊಳಿಸಿ ಕೆಲ ಸಮಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 4 ವರ್ಷಗಳ ಹಿಂದೆ ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಪಡೆದ ಅವರು ಗೋವಾದಲ್ಲೇ ನೆಲೆಸಿದ್ದರು. ಮಂಗಳವಾರ ಸ್ನೇಹಿತರ ಜೊತೆ ಬೀಚ್‍ಗೆ ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.