ರಾಜಧಾನಿ ಫೈಲ್ಸ್ ಚಿತ್ರ ತಂಡಕ್ಕೆ ನಿಟ್ಟುಸಿರಿಡುವಂತಹ ಸುದ್ದಿ ಸಿಕ್ಕಿದೆ. ಅಂದುಕೊಂಡಂತೆ ಆಗಿದ್ದರೆ ಇಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಬಿಡುಗಡೆಗೆ ಹಿನ್ನೆಡೆ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಮಾಡುವಂತಹ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ಈ ವಾರ ರಾಜಧಾನಿ ಫೈಲ್ಸ್ ಸಿನಿಮಾ ರಿಲೀಸ್ ಆಗುತ್ತಿದೆ.
ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಂಧ್ರ ಪ್ರದೇಶದಲ್ಲಿ ಸಿನಿಮಾ ರಾಜಕಾರಣ ಕೂಡ ಅಷ್ಟೇ ವೇಗವನ್ನು ಪಡೆದುಕೊಳ್ಳುತ್ತಿದೆ. ಅಲ್ಲಿನ ರಾಜಕೀಯ ಮುಖಂಡರನ್ನು ಹೀರೋ, ವಿಲನ್ ರೀತಿಯಲ್ಲಿ ತೋರಿಸುವ ಮೂಲಕ ಸಿನಿ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ ನಿರ್ದೇಶಕರು. ಈ ನಡೆಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರನ್ನು ಹೀರೋ ಆಗಿ ತೋರಿಸಿದ್ದ ಯಾತ್ರ 2 ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಜಗನ್ ವಿರೋಧಿಗಳನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ. ಚಂದ್ರ ಬಾಬು ನಾಯ್ಡು ವಿರುದ್ಧ ವ್ಯೂಹಂ ಚಿತ್ರ ರೆಡಿಯಾಗಿದೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕು. ಈ ನಡುವೆ ರಾಜಧಾನಿ ಫೈಲ್ಸ್ (Rajdhani Files) ಚಿತ್ರ ಸದ್ದು ಮಾಡಿತ್ತು.
ರಾಜಧಾನಿ ಫೈಲ್ಸ್ ಸಿನಿಮಾದಲ್ಲಿ ನೇರವಾಗಿ ಜಗನ್ ಬಗ್ಗೆಯೇ ಮಾತನಾಡದೇ, ಜಗನ್ ಪಾತ್ರದ ಹೆಸರನ್ನು ಕೊಡಲಿ ನಾನಿ ಪಾತ್ರವಾಗಿಸಿದ್ದಾರೆ. ಸಚಿವೆ ರೋಜಾ ಪಾತ್ರವನ್ನೂ ಈ ಸಿನಿಮಾದಲ್ಲಿ ತರಲಾಗಿದೆ. ನಾನಿ ಮತ್ತು ಸಚಿವೆ ಕ್ಲಬ್ ಡಾನ್ಸ್ ಮಾಡುವಂತಹ ದೃಶ್ಯಗಳು ಇದರಲ್ಲಿ ಇವೆ ಎನ್ನುವುದು ಜಗನ್ ಪಕ್ಷದ ಆರೋಪ. ಹಾಗಾಗಿ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಜಗನ್ ಪಕ್ಷ ಕೋರ್ಟ್ ಮೆಟ್ಟಿಲು ಏರಿತ್ತು.
ಜಗನ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಗುರಿಯಾಗಿರಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಇದರ ಉದ್ದೇಶ ರಾಜಕಾರಣ ಎನ್ನುವುದು ಸ್ಪಷ್ಟವಾಗಿದ್ದರೂ, ಸಿನಿಮಾ ಮೂಲಕ ರಾಜಕೀಯ ಕೆಸರೆರಿಚಾಟಕ್ಕೆ ತೊಡಗಿದ್ದು ದುರಂತ ಎನ್ನುತ್ತಾರೆ ಸಿನಿಮಾ ಮೇಕರ್ಸ್.