– ಮೈತ್ರಿಯ ಪ್ರಧಾನಿ ಅಭ್ಯರ್ಥಿ ಯಾರು ಎಂದಿದ್ದಕ್ಕೆ ಸಿಡಿಮಿಡಿಕೊಂಡ ಆಂಧ್ರ ಸಿಎಂ
– 1996 ಫಲಿತಾಂಶ ಎಂಪಿ ಚುನಾವಣೆ ಫಲಿತಾಂಶ ಮರಕಳಿಸುತ್ತೆ ಎಂದ ಎಚ್‍ಡಿಕೆ
ಬೆಂಗಳೂರು: ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದುಗೂಡಿಸುವ ಕೆಲಸವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡುತ್ತಿದ್ದು, ಇದೇ ಕಾರಣಕ್ಕೆ ಇಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೀಪಾವಳಿ ಹಬ್ಬದ ಶುಭಾಶಯ ತಿಳಿಸುವ ನೆಪದಲ್ಲಿ ಎಚ್.ಡಿ.ದೇವೇಗೌಡ ಅವರನ್ನು ಚಂದ್ರಬಾಬು ನಾಯ್ಡು ಭೇಟಿಯಾಗಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಸ್ಥಾಪಿಸಲು ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ ಚಂದ್ರಬಾಬು ನಾಯ್ಡು ಅವರನ್ನು ಸ್ವತಃ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತ್ಮೀಯವಾಗಿ ಬರ ಮಾಡಿಕೊಂಡರು. ಹೂಗುಚ್ಚ ನೀಡಿ ಸ್ವಾಗತ ಮಾಡಿದರು. ಆತ್ಮೀಯವಾಗಿ ದೇವೇಗೌಡ ಅಭಿನಂದನೆ ಸ್ವೀಕಾರ ಮಾಡಿದ ಚಂದ್ರಬಾಬು ನಾಯ್ಡು, ತಿರುಪತಿ ವೆಂಕಟೇಶ್ವರ ಮೂರ್ತಿ ಕೊಟ್ಟು ಅಭಿನಂದನೆ ಸಲ್ಲಿಸಿದರು. ಬಳಿಕ ರಾಷ್ಟ್ರ ರಾಜಕಾರಣದ ಕುರಿತು ಸುಮಾರು 45 ನಿಮಿಷ ನಾಯಕರು ಚರ್ಚೆ ಮಾಡಿದರು. ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಇಬ್ಬರು ನಾಯಕರಿಗೆ ಸಾಥ್ ನೀಡಿದರು.
Advertisement
Advertisement
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲಿ ಅನೇಕ ಸಮಸ್ಯೆ ಹುಟ್ಟು ಹಾಕಿದೆ. ಸ್ವಾಯತ್ತತೆಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ. ಕಾಂಗ್ರೆಸ್ ಸೇರಿ ದೇಶದ ಪ್ರಾದೇಶಿಕ ಪಕ್ಷಗಳು ಈ ಬಗ್ಗೆ ಹೋರಾಟ ಮಾಡಬೇಕಿದೆ. ಚಂದ್ರಬಾಬು ನಾಯ್ಡು ಇದರ ನೇತೃತ್ವವಹಿಸಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
Advertisement
ಈ ಕುರಿತು ನನ್ನನ್ನು ಭೇಟಿ ಮಾಡಿ ಇಂದು ಮಾತುಕತೆ ನಡೆಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಎನ್ನುವುದು ನಮ್ಮ ಗುರಿ. ಜಾತ್ಯಾತೀತ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ಕಾಂಗ್ರೆಸ್ ಪಕ್ಷ ಕೂಡ ನಮ್ಮ ಜೊತೆ ಕೈ ಜೋಡಿಸುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಜೊತೆ ಮುಂದಿನ ಹೋರಾಟದ ಬಗ್ಗೆ ಇಂದು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಚಂದ್ರಬಾಬು ನಾಯ್ಡು ಮಾತನಾಡಿ, ಮಹಾಘಟಬಂಧನ್‍ಗೆ ಬೆಂಬಲ ಸಿಕ್ಕಿದೆ. ದೇಶ ರಕ್ಷಣೆ, ಪ್ರಜಾಪ್ರಭುತ್ವ ರಕ್ಷಣೆಯಾಗಬೇಕಿದೆ. ಸಿಬಿಐ, ಇಡಿ, ಆರ್‍ಬಿಐ ಸೇರಿದಂತೆ ಎಲ್ಲಾ ಸಂಸ್ಥೆಗಳು ಕೇಂದ್ರದ ಬಿಜೆಪಿ ಸರ್ಕಾರದ ಕಪಿಮುಷ್ಠಿಯಲ್ಲಿವೆ. ಈ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ತಡೆಯಲು ಯತ್ನಿಸುತ್ತಿವೆ. ನೋಟ್ ಬ್ಯಾನ್‍ನಿಂದ ಏನು ಆಗಿಲ್ಲ. ತೈಲ ಬೆಲೆ ಏರಿಕೆಯಾಗಿದ್ದು ಇದು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಸರ್ಕಾರದ ಧೋರಣೆಯಿಂದ ರೈತರಿಗೆ ಅನ್ಯಾಯವಾಗಿದೆ. ಎಲ್ಲಾ ಸಂಸ್ಥೆಗಳು ಇವತ್ತು ಭಯದಲ್ಲಿ ಕಾಲಕಳೆಯುತ್ತಿವೆ. ಕೇಂದ್ರ ಸಂಸ್ಥೆಗಳನ್ನು ಉಳಿಸುವ ಕೆಲಸ ಈ ಮಿಷನ್ ನ ಉದ್ದೇಶ ಎಂದು ಹೇಳಿದರು.
ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಕೋಪಗೊಂಡ ಚಂದ್ರಬಾಬು ನಾಯ್ಡು, ಮಾಧ್ಯಮಗಳಿಗೆ ಪ್ರಧಾನಿ ಅಭ್ಯರ್ಥಿ ಚಿಂತೆ. ಆದರೆ ನಮ್ಮ ಇಂಟ್ರೆಸ್ಟ್ ದೇಶ, ಪ್ರಜಾಪ್ರಭುತ್ವ ಉಳಿಸುವುದು ಅಂತ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದರು. ದೆಹಲಿ ಮಾಧ್ಯಮಗಳು ಮೋದಿ ಪರ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಕ್ಕೆ ಮಾಧ್ಯಮಗಳು ಸಹಾಯ ಮಾಡುತ್ತಿಲ್ಲ. ಹೀಗಾಗಿ ಮೋದಿ ಕೈಗೊಂಬೆಯಲ್ಲಿ ಮಾಧ್ಯಮಗಳಿವೆ. ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನ ಎಲ್ಲಾ ಪಕ್ಷದ ನಾಯಕರು ಕುಳಿತು ನಿರ್ಧಾರ ಮಾಡುತ್ತೇವೆ. ಈಗಾಗಲೇ ಎಲ್ಲಾ ನಾಯಕರ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಈ ಮಿಷನ್ ದೇವೇಗೌಡರ ನೇತೃತ್ವದಲ್ಲಿ ಮುಂದುವರಿಸುತ್ತೇವೆ ಎಂದರು.
ಮಹಾಘಟಬಂಧನ್ ಗೆಲುವು ಸಾಧಿಸುವುದಿಲ್ಲ ಎನ್ನುವ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಚಂದ್ರಬಾಬು ನಾಯ್ಡು ಅವರು, ನಿನ್ನೆ ಕರ್ನಾಟಕ ಉಪಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಿದ್ದಾರೆ. ದೇಶದ ಜನರಲ್ಲೂ ಇದೇ ವಿಚಾರವಾಗಿದೆ. ಮಹಾಘಟಬಂಧನ್ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ದೇವೇಗೌಡ ಅನುಭವದಿಂದ ಬಿಜೆಪಿ ವಿರೋಧಿ ಪಕ್ಷಗಳ ಒಗ್ಗೂಡಿಸಬೇಕು ಅಂತ ಚಂದ್ರಬಾಬು ನಾಯ್ಡು ಬೆಂಬಲ ಕೇಳಿದ್ದಾರೆ. 2019 ಲೋಕಸಭೆಯಲ್ಲಿ 1996 ಫಲಿತಾಂಶ ಮರುಕಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews