ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’. ಈ ವಾರ ಅಂದರೆ, ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಮೂಲಕ ಖ್ಯಾತ ಸುದ್ದಿವಾಚಕಿ, ನಿರೂಪಕಿ ಜಾನ್ವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿದ್ದ ಅವರು ಆ ಹಂತದಲ್ಲಿಯೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವರು. ನಾಯಕಿಯಾಗೋ ಗುಣ ಲಕ್ಷಣಗಳನ್ನು ಹೊಂದಿದ್ದ ಜಾನ್ವಿ (Jhanvi) ಹೀರೋಯಿನ್ ಆಗುತ್ತಾರೆ ಎಂಬಂಥಾ ಸುದ್ದಿಗಳು ಆಗಾಗ ಹಬ್ಬಿಕೊಳ್ಳುತ್ತಿದ್ದವು. ಕಡೆಗೂ ಅಧಿಪತ್ರದ ಮೂಲಕ ಅದು ನಿಜವಾಗಿದೆ. ಖುದ್ದು ಜಾನ್ವಿ ಬಹುವಾಗಿ ಮೆಚ್ಚಿಕೊಂಡು ಈ ಸಿನಿಮಾದ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಸದರಿ ಪಾತ್ರ ನಟಿಯಾಗಿ ಹೊಸಾ ದಿಕ್ಕು ತೋರುತ್ತದೆಂಬ ಗಾಢ ನಂಬಿಕೆ ಜಾನ್ವಿಯದ್ದಾಗಿದೆ.
Advertisement
‘ಅಧಿಪತ್ರ’ ಚಯನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ. ಸಿದ್ಧಸೂತ್ರ ಮೀರಿದ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದ ಚಯನ್, ಆಯಾ ಪಾತ್ರಗಳಿಗೆ ಸೂಟ್ ಆಗುವಂಥಾ ಕಲಾವಿದರನ್ನು ಆರಂಭದ ಹಂತದಲ್ಲಿಯೇ ನಿಕ್ಕಿಯಾಗಿಸಿಕೊಂಡಿದ್ದರು. ಹಾಗೆ ಈ ಚಿತ್ರದ ನಾಯಕಿ ಪಾತ್ರಕ್ಕೆ ಒಪ್ಪುವಂತೆ ಕಂಡಿದ್ದು ಆ್ಯಂಕರ್ ಜಾನ್ವಿ. ಹೀಗೆ ನಿರ್ದೇಶಕರ ಇಂಗಿತ ಜಾನ್ವಿಗೆ ತಲುಪಿಕೊಂಡಿದ್ದದ್ದು ಖಾಸಗಿ ವಾಹಿನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಮೂಲಕ. ಅದಕ್ಕೆ ಒಪ್ಪಿಗೆ ಸೂಚಿಸಿದ ಜಾನ್ವಿಯವರನ್ನು ನಿರ್ದೇಶಕ ಚಯನ್ ಶೆಟ್ಟಿ ಸ್ಕ್ರಿಫ್ಟ್ ಸಮೇತ ಭೇಟಿಯಾಗಿದ್ದರು.
Advertisement
Advertisement
ಕೆಲ ಮಂದಿ ಆಯಾ ಕಲಾವಿದರನ್ನು ಅಪ್ರೋಚ್ ಮಾಡುವಾಗ ಅವರ ಪಾತ್ರವನ್ನ ಮಾತ್ರವೇ ವಿವರಿಸೋದಿದೆ. ಆದರೆ, ಚಯನ್ ಜಾನ್ವಿ ಮುಂದೆ ಒಂದಿಡೀ ಸ್ಕ್ರಿಫ್ಟ್ ಅನ್ನು ಇಂಚಿಂಚಾಗಿ ಹರವಿದ್ದರು. ಹಾಗೆ ಕಥೆ ಕೇಳಿದ ಜಾನ್ವಿಗೆ ತನ್ನ ಪಾತ್ರ ಸೇರಿದಂತೆ ಒಂದಿಡೀ ಕಥೆಯೇ ಇಷ್ಟವಾಗಿ ಒಪ್ಪಿಗೆ ಸೂಚಿಸಿದ್ದರಂತೆ. ಈ ಮೂಲಕ ಅವರು ನಾಯಕಿಯಾಗಲು ಮುಹೂರ್ತ ಕೂಡಿ ಬಂದಿತ್ತು. ವಿಶೇಷವೆಂದರೆ, ಜಾನ್ವಿ ಪಾಲಿಗೆ ಇಲ್ಲಿ ಪತ್ರಕರ್ತೆಯ ಪಾತ್ರವೇ ಒಲಿದು ಬಂದಿದೆ. ಈ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಅಖಾಡಕ್ಕಿಳಿಯೋ ಆ ಪಾತ್ರ ಎಂಬತ್ತರ ದಶಕದ ನೆರಳಿನಲ್ಲಿ ಚಲಿಸುತ್ತದೆಯಂತೆ. ಅಂದಹಾಗೆ, ಅವರಿಲ್ಲಿ ಬೃಹತಿ ಎಂಬ ಚೆಂದದ ಪಾತ್ರಕ್ಕೆ ಜೀವ ತುಂಬಿದ್ದಾರೆ.
Advertisement
ಆ ನಂತರ ಕುಂದಾಪುರ, ಹೆಬ್ರಿ ಮುಂತಾದೆಡೆಗಳಲ್ಲಿ ಬಲು ಖುಷಿಯಿಂದಲೇ ಜಾನ್ವಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಒಂದು ಅಪ್ಪಟ ಸಿನಿಮಾ ವ್ಯಾಮೋಹಿಗಳ ತಂಡದ ಭಾಗವಾದ, ನಟಿಯಾಗಿ ತಮ್ಮನ್ನು ತಾವೇ ಹೊಳಪುಗಟ್ಟಿಸಿಕೊಂಡ ಬಗ್ಗೆ ಜಾನ್ವಿಗೊಂದು ತೃಪ್ತ ಭಾವವಿದೆ. ಒಂದು ಪ್ರತಿಭಾನ್ವಿತರ ತಂಡದ ಭಾಗವಾಗುವ ಅವಕಾಶ ಸಿಕ್ಕುವುದೇ ಅಪರೂಪ. ಅದು ಮೊದಲ ಹೆಜ್ಜೆಯಲ್ಲಿಯೇ ಸಾಧ್ಯವಾದ ಖುಷಿ ಜಾನ್ವಿಗಿದೆ. ಅಧಿಪತ್ರ ಎಂಬ ಟೈಟಲ್ಲಿನಲ್ಲಿಯೇ ಒಂದಿಡೀ ಕಥೆಯ ಸಾರವಿದೆ. ಅದರ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಅದು ಪ್ರೇಕ್ಷಕರನ್ನೆಲ್ಲ ಬೆರಗುಗೊಳಿಸೋದು ಪಕ್ಕಾ. ಒಂದು ಟೈಟಲ್ ಮೇಲೆ ಚಿತ್ರತಂಡ ವರ್ಕ್ ಮಾಡಿದ ರೀತಿಯೇ ಜಾನ್ವಿ ಅವರೊಳಗೊಂದು ಬೆರಗು ಮೂಡಿಸಿದೆಯಂತೆ.
ಸಾಮಾನ್ಯವಾಗಿ ನಾಯಕಿ ಪಾತ್ರವೆಂದಾಕ್ಷಣ ಅದೇ ತಥಾಕಥಿತ ಲವ್ವು, ಮರ ಸುತ್ತೋದು, ಡ್ಯುಯೆಟ್ ಅಂತೆಲ್ಲ ಒಂದಷ್ಟು ಕಲ್ಪನೆಯಿದೆ. ಅಧಿಪತ್ರದಲ್ಲಿ ಜಾನ್ವಿಯ ಪಾತ್ರವನ್ನು ನಿರ್ದೇಶಕ ಚಯನ್ ಶೆಟ್ಟಿ ಸಿದ್ಧಸೂತ್ರದಾಚೆ ರೂಪಿಸಿದ್ದಾರಂತೆ. ಅದರ ಅಸಲಿ ಚಹರೆ ಪ್ರೇಕ್ಷಕರೆದುರು ಅನಾವರಣಗೊಳ್ಳಲು ಇದೀಗ ದಿನಗಣನೆ ಶುರುವಾಗಿದೆ. ಅಷ್ಟಕ್ಕೂ ಜಾನ್ವಿ ಸುದ್ದಿ ವಾಚಕಿಯಾಗಿದ್ದ ಕಾಲದಲ್ಲಿಯೇ ನಾಯಕಿಯಾಗೋದಕ್ಕೆ ಹಲವಾರು ಅವಕಾಶಗಳು ಬಂದಿದ್ದವಂತೆ. ಆದರೆ, ಆ ದಿನಗಳಲ್ಲಿನ ಖಾಸಗೀ ಬದುಕಿನ ಹಳವಂಡಗಳಿಂದ ಅದರತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಖುದ್ದು ಜಾನ್ವಿ ಅವರಿಗೇ ನಟಿಯಾಗಬೇಕೆಂಬ ಆಕಾಂಕ್ಷೆ ಇದ್ದದ್ದು ನಿಜ. ಆ ನಂತರ ಅದಕ್ಕಾಗಿ ತಯಾರಾದಾಗಲೂ ಕಥೆ ಮತ್ತು ಪಾತ್ರದ ಆಯ್ಕೆಯ ಬಗ್ಗೆ ಅವರೊಳಗೊಂದು ನಿಖರವಾದ ಪರಿಕಲ್ಪನೆ ಇತ್ತು. ಹಾಗೆ ಒಪ್ಪಿಗೆಯಾಗೋ ಪಾತ್ರ ಬಂದರೆ ಮಾತ್ರ ಒಪ್ಪಿಕೊಳ್ಳುವ ಗಟ್ಟಿ ನಿರ್ಧಾರ ಅವರದ್ದಾಗಿತ್ತು.
View this post on Instagram
ಅಂತೂ ‘ಅಧಿಪತ್ರ’ ಚಿತ್ರದ ಮೂಲಕ ಅದು ಕೈಗೂಡಿದೆ. ಸಿನಿಮಾವನ್ನು ಧ್ಯಾನದಂತೆ ಹಚ್ಚಿಕೊಂಡಿರೋ ರೂಪೇಶ್ ಶೆಟ್ಟಿ ಜೊತೆ ನಟಿಸೋ ಅವಕಾಶ ಸಿಕ್ಕಿರೋದರ ಬಗ್ಗೆಯೂ ಜಾನ್ವಿಗೆ ಖುಷಿಯಿದೆ. ಹಿರಿಯ ಕಲಾವಿದರೊಂದಿಗೆ ನಟಿಸೋ ಅವಕಾಶ ಸಿಕ್ಕಿ, ಅದನ್ನೆ ಚೆಂದಗೆ ಬಳಸಿಕೊಂಡ ಆತ್ಮತೃಪ್ತಿಯೂ ಅವರಲ್ಲಿದೆ. ಒಟ್ಟಾರೆಯಾಗಿ ಇದುವರೆಗೂ ಸುದ್ದಿ ವಾಚಕಿಯಾಗಿ, ನಿರೂಪಕಿಯಾಗಿ, ಗಿಚ್ಚಿಗಿಲಿಗಿಲಿ ಶೋ ಮೂಲಕ ನಟಿಯಾಗಿಯೂ ಗಮನ ಸೆಳೆದಿದ್ದ ಜಾನ್ವಿ ಇದೀಗ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮುಂದಿನ ಹೆಜ್ಜೆಗಳ ಬಗ್ಗೆ ನಿಖರ ನಿರ್ಧಾರ ಹೊಂದಿರುವ ಅವರ ಪಾಲಿಗೆ ಒಳ್ಳೊಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ಬಯಕೆ ಇದೆ. ಅಧಿಪತ್ರದ ಪಾತ್ರ ಅದೆಲ್ಲವನ್ನು ಸಾಧ್ಯವಾಗಿಸುವಷ್ಟು ಶಕ್ತವಾಗಿದೆ ಎಂಬ ನಂಬಿಕೆಯೂ ಅವರಲ್ಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ‘ಅಧಿಪತ್ರ’ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.