ಕನ್ನಡದ ಹೆಸರಾಂತ ನಿರೂಪಕಿ ಅಪರ್ಣಾ (Aparna) ಜು.11ರಂದು ಕ್ಯಾನ್ಸರ್‌ನಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್ ಅನೇಕ ನಟ, ನಟಿಯರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ. ಇದೀಗ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಅಪರ್ಣಾ ನಿರೂಪಣೆ ಮಾಡುವಾಗ ಆಶ್ಚರ್ಯ ಆಗುತ್ತಿತ್ತು. ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ನಿರೂಪಣೆ ಬಗ್ಗೆ ಅವರದಲ್ಲಿದ್ದ ಆತ್ಮವಿಶ್ವಾಸ ಅದ್ಭುತ ಅನಿಸುತ್ತಿತ್ತು. ಅಪರ್ಣಾರನ್ನು ನೋಡಿದ್ರೆ ಗೌರವ ಬರುತ್ತದೆ. ಎಂದಿಗೂ ಅವರು ಕನ್ನಡದ ಆಸ್ತಿ ಎಂದು ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ
ನಮ್ಮ ಮನೆಗೂ ಅವರ ಮನೆಗೂ ಒಂದು ಬೀದಿ ಅಷ್ಟೇ ಅಂತರವಿದೆ. ಸದಾ ಟಿವಿಯಲ್ಲಿ ನೋಡ್ತಿದ್ದೆ. ನಿರೂಪಣೆ ಮಾಡುವ ವೇಳೆ, ಸ್ಕ್ರಿಪ್ಟ್‌ನಲ್ಲಿ ಏನೇ ಬದಲಾವಣೆಯಾದರು ಕೂಲ್ ಆಗಿ ರೆಸ್ಪಾನ್ಸ್ ಮಾಡುತ್ತಿದ್ದರು. ನಮಗೆ ಅಪರ್ಣಾ ಅಂದಾಕ್ಷಣ ನೆನಪಾಗೋದು ಅವರ ಕನ್ನಡ ಎಂದು ನಟಿಯ ಬಗ್ಗೆ ರಮೇಶ್ ಅರವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರಿಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಮೊದಲೇ ಗೊತ್ತಿತ್ತು. ಕ್ಯಾನ್ಸರ್ ಕೊನೆಯ ಸ್ಟೇಜ್ ಆಗಿತ್ತು ಅಂದರು ಅವರ ಮನೆಯವರು. ಆದರೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾವು ನೋಡಿದಂತಹ ನಿರೂಪಕರಲ್ಲಿ ಅತೀ ಶ್ರೇಷ್ಠ ನಿರೂಪಕಿಯಾಗಿದ್ದರು ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.
ಅಂದಹಾಗೆ, ಇಂದು (ಜು.12) ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.