ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಿರೂಪಕಿ ಅನುಶ್ರೀ (Anushree), ನಮ್ರತಾ ಗೌಡ, ‘ಬಿಗ್ ಬಾಸ್’ ರಂಜಿತ್ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಅನುಶ್ರೀ ಮಾಧ್ಯಮಕ್ಕೆ ಮಾತನಾಡಿ, ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದು ಪುನೀತ್ ಅವರನ್ನು ಸ್ಮರಿಸಿದ್ದಾರೆ.
ಅನುಶ್ರೀ ಮಾತನಾಡಿ, ಅಪ್ಪು ಸ್ಮಾರಕಕ್ಕೆ ಇವತ್ತು ಜಾತ್ರೆ ಹಾಗೇ ಜನ ಸೇರಿದ್ದಾರೆ. ಈ ರೀತಿ 50ನೇ ವರ್ಷದ ಹುಟ್ಟುಹಬ್ಬ ಯಾರಿಗೂ ಆಗಿರಲಿಲ್ಲ. ಲಕ್ಷಾಂತರ ಜನ ಅವರ ಹೆಸರನ್ನು ಕೂಗೋ ರೀತಿ ನೋಡಿದ್ರೆ ನಿಜಕ್ಕೂ ಅಪ್ಪು ಸರ್ ಇದೆನ್ನೆಲ್ಲಾ ಕೇಳಿಸಿಕೊಳ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ
ದಿನದಿಂದ ದಿನಕ್ಕೆ ಅಪ್ಪು ಸರ್ ಮೇಲಿನ ಅಭಿಮಾನಿಗಳ ಅಭಿಮಾನ ಜಾಸ್ತಿ ಆಗ್ತಿದೆ. ಸೂರ್ಯ ಚಂದ್ರ ಇರೋವರೆಗೂ ಅಪ್ಪು ಸರ್ ಅಭಿಮಾನಿಗಳ ಪ್ರೀತಿ ಯಾವತ್ತಿಗೂ ಗ್ರೇಟ್ ಆಗಿರುತ್ತದೆ. ಆ ಎಲ್ಲಾ ಅಭಿಮಾನಿಗಳಲ್ಲಿ ನಾನು ಒಬ್ಬಳು. ಸುಖದಲ್ಲಿ ತುಂಬಾ ಜನ ನಿಮ್ಮೊಂದಿಗೆ ಬಂದು ನಿಲ್ಲಬಹುದು. ಆದರೆ ಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲವವರೇ ನಿಜವಾದ ಹೀರೋ. ನನ್ನೊಂದಿಗೆ ನನ್ನ ಕಷ್ಟದಲ್ಲಿ ನಿಂತಿದ್ದು ಅಪ್ಪು ಸರ್. ಅದನ್ನು ನಾನ್ ಯಾವತ್ತು ಮರೆಯೊಲ್ಲ. ನಾನು ಮಾಡೋ ಪ್ರತಿ ಕೆಲಸವನ್ನು ಅವರು ಪ್ರಶಂಸಿಸುತ್ತಿದ್ದರು. ಇವತ್ತಿಗೂ ಅವರನ್ನು ನೆನಪು ಮಾಡಿಕೊಂಡ್ರೆ ಸಾಕಷ್ಟು ವಿಚಾರಗಳು ನೆನಪಾಗುತ್ತದೆ ಎಂದು ಪುನೀತ್‌ರನ್ನು ನೆನೆದು ನಟಿ ಭಾವುಕರಾಗಿದ್ದಾರೆ.
ಮೊನ್ನೆ ‘ಅಪ್ಪು’ ಸಿನಿಮಾ ನೋಡಿದಾಗ ಶುರುವಿನಲ್ಲಿ ಅವರಿಲ್ಲ ಅಂತ ಎಲ್ಲೂ ಅನಿಸಲಿಲ್ಲ. ಕಡೆಯಲ್ಲಿ ಸಿನಿಮಾ ಮುಗಿತಾ ಮತ್ತೆ ಒಂದು ವರ್ಷ ಕಾಯಬೇಕಾ ಅನಸ್ತು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮ ಜೊತೆ ಇರುತ್ತಾರೆ. ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದರು.
ಬಳಿಕ ಅಭಿಮಾನಿಗಳು ತಂದ ಕೇಕ್ ಅನ್ನು ಅಪ್ಪು ಸ್ಮಾರಕದ ಬಳಿ ಅನುಶ್ರೀ ಕತ್ತರಿಸಿದರು. ಫ್ಯಾನ್ಸ್‌ಗೆ ತಿನ್ನಿಸಿ ಸಂಭ್ರಮಿಸಿದರು.