ಬೆಂಗಳೂರು: ಕೆಜಿಎಫ್ ಸಿನಿಮಾದ ಯಶಸ್ಸು ನನ್ನ ಪತ್ನಿ ಗಾಯತ್ರಿ ಅವರಿಗೂ ಸಲ್ಲುತ್ತದೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.
ನಗರದಲ್ಲಿ ನಡೆದ ಕೆಜಿಎಫ್ ಚಿತ್ರತಂಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತ್ ನಾಗ್ ಅವರು, ಕೆಜಿಎಫ್ ಸಿನಿಮಾದ ಡಬ್ಬಿಂಗ್ ಪೂರ್ಣಗೊಳಿಸಿ ನಾನು ವಿದೇಶಕ್ಕೆ ಹೋಗಿದ್ದೆ. ಇತ್ತ ಚಿತ್ರತಂಡ ನನ್ನ ಪಾತ್ರಕ್ಕೆ ಹಿಂದಿ ಡಬ್ಬಿಂಗ್ ನಡೆಸುತ್ತಿದ್ದರು. ನಾನು ವಿದೇಶದಿಂದ ಮರಳಿದ ಬಂದಾಗ ಯಶ್ ಹಾಗೂ ನಿರ್ದೇಶಕರು ನನ್ನ ಬಳಿಗೆ ಬಂದು, ನಿಮ್ಮ ಪಾತ್ರಕ್ಕೆ ಯಾರೋಬ್ಬರ ಧ್ವನಿ ಸರಿಯಾಗುತ್ತಿಲ್ಲ. ನೀವೇ ಹಿಂದಿ ಡಬ್ಬಿಂಗ್ ಮಾಡಬೇಕು ಅಂತ ಕೇಳಿಕೊಂಡರು. ಆದರೆ ನಾನು ಹಿಂದಿ ಮಾತನಾಡದೇ ಎಷ್ಟೋ ದಿನಗಳೇ ಕಳೆದು ಹೋಗಿತ್ತು. ಆಗ ನನಗೆ ಬೆಂಬಲ ನೀಡಿದ್ದು ನನ್ನ ಪತ್ನಿ ಗಾಯತ್ರಿ ಎಂದು ಅನಂತ್‍ನಾಗ್ ತಿಳಿಸಿದರು. ಇದನ್ನು ಓದಿ: ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್
Advertisement
Advertisement
ಹಿಂದಿ ಡಬ್ಬಿಂಗ್ ವೇಳೆ ರಾಧಿಕಾ ಅವರಿಗೆ ಹೆಣ್ಣು ಮಗುವಾಗಿತ್ತು. ಬಾಣಂತಿ ವಿಶ್ರಾಂತಿಯ ಪಡೆಯಬೇಕಿತ್ತು. ಇತ್ತ ನನಗೆ ಕೊಂಕಣಿ ಭಾಷೆಯ ಶೈಲಿಯಲ್ಲಿಯೇ ಹಿಂದಿ ಮಾತನಾಡಿ ಬಿಡ್ತೀನಿ ಎನ್ನುವ ಭಯವಿತ್ತು. ಈ ವೇಳೆ ಉತ್ತರ ಪ್ರದೇಶ, ಪಂಜಾಬ್, ಮುಂಬೈನಲ್ಲಿ ಬೆಳೆದಿದ್ದ ಗಾಯತ್ರಿ ನನಗೆ ಹಿಂದಿ ಡೈಲಾಗ್‍ಗಳನ್ನು ಹೇಳಲು ಮುಂದಾದಳು. ಡಬ್ಬಿಂಗ್ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕುಳಿತು ಹಿಂದಿ ಉಚ್ಛಾರಣೆ ತಪ್ಪಾಗದಂತೆ ಎಚ್ಚರವಹಿಸಿದಳು. ಆಕೆಯ ಸಹಾಯದಿಂದ ಹಿಂದಿ ಡಬ್ಬಿಂಗ್ ಮುಗಿಯಿತು. ಇದರಿಂದಾಗಿ ನಾನು ಗಾಯತ್ರಿ ಅವರಿಗೂ ಕೂಡ ವಿಶೇಷ ಧನ್ಯವಾದ ಹೇಳುತ್ತೇನೆ. ಈ ಚಿತ್ರದ ಯಶಸ್ಸಿಗೆ ಅವರ ಪಾತ್ರವೂ ಪ್ರಮುಖವಾಗಿದೆ ಎಂದು ಅನಂತ್ ನಾಗ್ ಹೇಳಿದರು.
Advertisement
Advertisement
ಯಶ್ ಬಗ್ಗೆ ಹೊಗಳಿಕೆ:
ರಾಕಿಂಗ್ ಸ್ಟಾರ್ ಯಶ್ 10 ವರ್ಷಗಳ ಹಿಂದೆ ‘ಪ್ರೀತಿ ಇಲ್ಲದೆ ಮೇಲೆ’ ಸಿನಿಮಾದಲ್ಲಿ ನನ್ನ ಮಗನ ಪಾತ್ರದಲ್ಲಿ ನಟಿಸಿದ್ದ. ಆಗಿನ್ನು ಯಶ್ ಹಾಲುಗೆನ್ನೆಯ ಹುಡುಗ. ಅಲ್ಲಿಂದ ಆತನ ಜೊತೆಗೆ ಉತ್ತಮ ಒಡನಾಟ ಆರಂಭವಾಯಿತು. ಯಶ್ ಚಿತ್ರೀಕರಣದ ವೇಳೆ ಕುತೂಹಲ ಮೂಡಿಸುವ ಪ್ರಶ್ನೆಗಳನ್ನು ಕೇಳುತ್ತಿದ್ದ. ಗೂಗ್ಲಿ ಸಿನಿಮಾ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಯಶ್ ಜೊತೆಗೆ ನಟಿಸಿದ್ದೇನೆ ಎಂದು ತಿಳಿಸಿದರು.
ಕೆಜಿಎಫ್ ಸಿನಿಮಾ ಭಾರತ ಹಾಗೂ ವಿದೇಶಿ ಭಾಷೆಗಳಲ್ಲಿ ತೆರೆ ಕಂಡು, ಯಶಸ್ವಿಯಾಗಿದೆ. ಯಶ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾನೆ. ನಿರ್ದೇಶಕ ವಿಜಯ್ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ಸಿನಿಮಾದ ಯಶಸ್ಸು ಸಲ್ಲುತ್ತವೆ ಎಂದರು.
ಡಬ್ಬಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅನಂತ್‍ನಾಗ್ ಅವರು, ಪರಭಾಷೆ ಚಿತ್ರಗಳನ್ನು ಡಬ್ಬಿಂಗ್ ಮಾಡಬಾರದು ಎನ್ನುವ ವಿಚಾರವಿತ್ತು. ಆದರೆ ಈಗ ಕೆಜಿಎಫ್ ಚಿತ್ರ ಬೇರೆ ಭಾಷೆಗಳಲ್ಲಿ ಹೋದ ಮೇಲೆ ಅದರ ದೃಷ್ಟಿಕೋನ ಬದಲಾಗಿದೆ. ಇಂತಹ ಅನೇಕ ಚಿತ್ರಗಳು ಸ್ಯಾಂಡಲ್‍ವುಡ್‍ನಿಂದ ತೆರೆ ಕಾಣಬೇಕು ಅಂತ ಜನ ಬಯಸುತ್ತಿದ್ದಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv