ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸಲು ರಾಜ್ಯ ಬಿಜೆಪಿ ನಾಯಕರು ಒಪ್ಪಿಗೆ ನೀಡಿದ್ದಾರೆ.
ಇಂದು ಮಾಜಿ ಡಿಸಿಎಂ ಆರ್ ಅಶೋಕ್ ನಿವಾಸದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಾಸಕರಾದ ವಿ.ಸೋಮಣ್ಣ, ಉದಯ್ ಗರುಡಾಚಾರ್, ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಈ ಸಭೆಯಲ್ಲಿ ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಯಿತು.
ಸಭೆಯ ಬಳಿಕ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಈ ಬಾರಿ ತೇಜಸ್ವಿನಿ ಅವರು ಬಿಜೆಪಿ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಅವರನ್ನೇ ಪಕ್ಷದ ಅಭ್ಯರ್ಥಿ ಆಗಬೇಕು ಎಂಬ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಹೈಕಮಾಂಡ್ ಅವರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆಯನ್ನು ತೀರ್ಮಾನ ಮಾಡುತ್ತದೆ. ಅನಂತಕುಮಾರ್ ಅವರು 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲುವು ಪಡೆದಿದ್ದರು. ಆದ್ದರಿಂದ ಈ ಬಾರಿ ತೇಜಸ್ವಿನಿ ಅವರನ್ನು ಗೆಲ್ಲಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಸಭೆ ಬಳಿಕ ಮಾತನಾಡಿದ ತೇಜಸ್ವಿನಿ ಅವರು, ನಾನು ಅನಂತಕುಮಾರ್ ಅವರನ್ನು ಮದುವೆಯಾಗಿ ಬಂದಾಗಿನಿಂದ ಬಿಜೆಪಿ ಪರಿವಾರದ ಭಾಗವೇ ಆಗಿದ್ದೇವೆ. ನಮ್ಮೆಲ್ಲ ಅಣ್ಣಂದಿರು ಒಮ್ಮತದಿಂದ ನನ್ನ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದ್ದಾರೆ. ಹೈಕಮಾಂಡ್ ಯಾವ ತೀರ್ಮಾನ ಕೈಗೊಂಡರೂ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಪಕ್ಷದ ಹಿರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಕೆಲಸ ಮಾಡುತ್ತೇನೆ. ಸ್ಪರ್ಧೆ ಬಗ್ಗೆ ಶೀಘ್ರವೇ ಗೊತ್ತಾಗಲಿದೆ. ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv