ಕಾರವಾರ: ಶಿರಸಿ ಗಲಾಟೆ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಇಷ್ಟು ಸಾಕಾ ಇನ್ನೂ ಬೇಕಾ ತಪರಾಕಿ ಸಿದ್ದರಾಮಯ್ಯನವರೇ? ಹೇಮಂತ್ ನಿಂಬಾಳ್ಕರ್, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯರಂಥ ಜನರಿದ್ದರೆ ಮುಂದಿದೆ ನೋಡಿ ಮಾರಿಹಬ್ಬ. ಪ್ರತಿಭಟನೆ ವೇಳೆ ಬಂಧಿರಾಗಿದ್ದ ಎಲ್ಲರಿಗೂ ನ್ಯಾಯಾಲಯ ಜಾಮೀನು ನೀಡಿದ್ದು, ಇದು ಪ್ರಜಾಪ್ರಭುತ್ವದ ವಿಜಯ ಎಂದು ಪೋಸ್ಟ್ ಹಾಕಿದ್ದಾರೆ.
ಶಿರಸಿಯಲ್ಲಿ ಮೊನ್ನೆಯ ದಿನ ಪೊಲೀಸರಿಂದ ಪ್ರೇರಿತ ಗಲಭೆಯಲ್ಲಿ ಬಂಧಿತರಾಗಿದ್ದ 62 ಮಂದಿ ಮುಗ್ಧರನ್ನು ಶಿರಸಿ ನ್ಯಾಯಾಲಯ ಇಂದು ಜಾಮೀನು ಪಡೆದು ಬಿಡುಗಡೆಗೆ ಆದೇಶಿಸಿದೆ. ಕೇವಲ ಒಂದೂವರೆ ದಿನದಲ್ಲಿ ಬಿಡುಗಡೆಯ ಆದೇಶ ಪಡೆದ ಕ್ರಮವು ಐತಿಹಾಸಿಕವಾಗಿದ್ದು, ಈ ತೀರ್ಪು ಪೊಲೀಸ್ ಸಮವಸ್ತ್ರದಲ್ಲಿ ದಾದಾಗಿರಿ ಮಾಡಲು ಹೊರಟಿದ್ದ ನಿಂಬಾಳ್ಕರ್ ಎಂಬ ಹುಂಬ ಅಧಿಕಾರಿಗೆ ತೀವ್ರವಾದ ಕಪಾಳ ಮೋಕ್ಷ ಮಾಡಿದಂತಾಗಿದೆ. ಮನಬಂದಂತೆ ಸೆಕ್ಷನ್ 307 ಜರುಗಿಸಿ ವಿಕೃತ ಪಭುತ್ವ ಸಾಧಿಸಲು ಹೊರಟರೆ ಈ ದೇಶದ ಕಾನೂನು ಸುಮ್ಮನೆ ಕೂರುವುದಿಲ್ಲ ಎಂದು ಇಂದಿನ ನ್ಯಾಯಾಲಯದ ತೀರ್ಮಾನ ಸ್ಪಷ್ಟವಾಗಿ ತಿಳಿಸಿದೆ. ಇದು ಪ್ರಜಾಪ್ರಭುತ್ವದ ವಿಜಯ ಎಂದು ಹೇಳಿದ್ದಾರೆ.
ಸನ್ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಮುಖವನ್ನು ಮತ್ತೊಮ್ಮೆ ಕನ್ನಡಿ ಮುಂದೆ ನೋಡಿಕೊಳ್ಳಿ. ನಿಮ್ಮ ಒಡ್ಡೋಲಗದ ಸಹೋದ್ಯೋಗಿಗಳು ಸಹ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗುವ ದಿನ ದೂರವಿಲ್ಲ. ವಿದ್ರೋಹಿಗಳ ಬೆಂಬಲಕ್ಕೆ ನಿಂತು ದೇಶಭಕ್ತರನ್ನು ಸದೆಬಡಿಯುವ ನಿಮ್ಮ ಯೋಜನೆಗೆ, ನಿಮ್ಮ ಅಮೂಲ್ಯ ಸಲಹೆಗಾರನಾಗಲಿ ಅಥವಾ ನಾಲಾಯಕ್ ಗೃಹ ಮಂತ್ರಿಯಾಗಲಿ ಇನ್ನೇನು ತಾನೇ ಕಿಸಿಯಲು ಸಾಧ್ಯ? ನಮ್ಮ ಹೋರಾಟಕ್ಕೆ ಇಂದಿನ ಈ ತೀರ್ಪು ಬಹು ದೊಡ್ಡ ನೈತಿಕ ಬೆಂಬಲ ನೀಡಿ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದ್ದು ಕೋಮುವಾದಿ, ಜಾತಿವಾದಿ ಹುಂಬ ಸರ್ಕಾರವಲ್ಲದೆ, ದೇಶದೊಳಗೆ ಇರುವ ವಿದ್ರೋಹಿಗಳಿಗೆ ಸಹ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ. ಹುಂಬ ಧೈರ್ಯವಿದ್ದರೆ ಎದುರಿಸಲಿ ಎಂದು ಆಕ್ರೋಶದಿಂದ ಬರೆದಿದ್ದಾರೆ.
ನ್ಯಾಯಾಲಯದಲ್ಲಿ ನಮ್ಮ ದೇಶ ಭಕ್ತರ ಪರವಾಗಿ ವಾದಿಸಿ ನ್ಯಾಯ ದೊರೆಕಿಸಿಕೊಟ್ಟ ಅಷ್ಟು ವಕೀಲ ವೃಂದದವರಿಗೆ ನನ್ನ ಬಹುದೊಡ್ಡ ಧನ್ಯವಾದಗಳು. ದೇಶ ಕಟ್ಟುವ ಕೆಲಸದಲ್ಲಿ ಜೊತೆಯಾದ ಎಲ್ಲರಿಗೂ ನನ್ನ ಅನಂತ ವಂದನೆಗಳನ್ನು ಎಂದು ಕೊನೆಯಲ್ಲಿ ತಿಳಿಸಿದ್ದಾರೆ.