ನವದೆಹಲಿ: ಜಾತ್ಯತೀತ ಮತ್ತು ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಲೋಕಸಭಾ ಕಲಾಪದಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದಾರೆ.
ಬುಧವಾರ ಸಂಪುಟದಿಂದ ಹೆಗ್ಡೆಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದ ಪ್ರತಿಪಕ್ಷಗಳ ಸದಸ್ಯರು ಗುರುವಾರ ಲೋಕಸಭಾ ಕಲಾಪ ಆರಂಭವಾಗುತ್ತಲೇ ಮತ್ತೆ ಅನಂತ್ ಕುಮಾರ್ ಹೆಗ್ಡೆ ವಿಚಾರವನ್ನು ಎತ್ತಿ ಆಕ್ಷೇಪ ವ್ಯಕ್ತಪಡಿಸಿದರು.
Advertisement
ಈ ಸಂದರ್ಭದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅನಂತ್ ಕುಮಾರ್ ಹೆಗ್ಡೆ ಅವರೇ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದು ಹೇಳಿದರು. ನಂತರ ಭಾಷಣ ಆರಂಭಿಸಿದ ಅನಂತ್ ಕುಮಾರ್ ಹೆಗ್ಡೆ, ಅಧ್ಯಕ್ಷರೇ ನಿಮ್ಮ ಮೂಲಕ ನಾನು ಸ್ಪಷ್ಟಪಡಿಸುತ್ತೇನೆ. ಸಂವಿಧಾನ, ಸಂಸತ್ ಹಾಗೂ ಅಂಬೇಡ್ಕರ್ ವಿಚಾರದಲ್ಲಿ ನನ್ನ ನಿಷ್ಟೆ ಕಡಿಮೆ ಇಲ್ಲ. ಈ ವಿಚಾರಕ್ಕೆ ಯಾವುದೇ ಪ್ರಶ್ನಾರ್ಥಕ ಚಿಹ್ನೆ ಹಾಕುವ ಅಗತ್ಯವಿಲ್ಲ. ಒಬ್ಬ ನಾಗರಿಕನಾಗಿ ನಾನು ಈ ಸಂವಿಧಾನದ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಹೇಳಲಷ್ಟೇ ಸಾಧ್ಯ ಎಂದು ಹೇಳಿದರು.
Advertisement
Advertisement
ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ, ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಇದಕ್ಕೆ ಉಳಿದ ವಿರೋಧ ಪಕ್ಷಗಳ ನಾಯಕರು ಸಹ ಬೆಂಬಲ ಸೂಚಿಸಿದರು.
Advertisement
ಈ ಸಂದರ್ಭದಲ್ಲಿ ಸುಮಿತ್ರಾ ಮಹಾಜನ್ ಹೆಗ್ಡೆ ಅವರನ್ನು ಉದ್ದೇಶಿಸಿ, ನಿಮ್ಮ ಮನದಲ್ಲಿ ಅಂಬೇಡ್ಕರ್ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯ ಇಲ್ಲ. ಜೀವನದಲ್ಲಿ ನೀವು ಆಡಿದ ಕೆಲವೊಂದು ಮಾತು ನಿಮಗೆ ಸರಿ ಎನಿಸುತ್ತದೆ. ಆದರೆ ನಿಮ್ಮ ಮುಂದೆ ಇರುವವರಿಗೆ ಅದು ನೋವಾಗುತ್ತದೆ. ಅಷ್ಟೇ ಅಲ್ಲದೇ ಕ್ಷಮೆ ಕೇಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ. ಬೇರೆಯವರಿಗೆ ನೋವಾಗಿರುವುದರಿಂದ ನೀವು ಕ್ಷಮೆ ಕೇಳಬಹುದು. ಇದು ಸದನ ಇಲ್ಲಿ ನಾವು ಎಲ್ಲರೂ ಒಗ್ಗಟಾಗಿ ಇರುತ್ತೇವೆ ಎಂದು ಹೇಳಿದರು.
ಇದಕ್ಕೆ ಅನಂತ್ ಕುಮಾರ್ ಹೆಗ್ಡೆ, ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ ಅಷ್ಟೆ ಅಲ್ಲೇ ಅದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿ ಕುಳಿತುಕೊಂಡರು.
ಹೆಗ್ಡೆ ಹೇಳಿದ್ದು ಏನು?
ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.
ಜಾತ್ಯತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತು ಎತ್ತಿದ್ರೆ ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದರು.
ಹೌದು. ಸಂವಿಧಾನ ಜಾತ್ಯತೀತರು ಅಂತ ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಹೀಗಾಗಿ ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ಧವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದ್ದರು.
https://www.youtube.com/watch?v=_3Hz_6SnMAE