ಕಾರವಾರ: ಎಲ್ಲಿ ವಿರೋಧ ಕಂಡುಬರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು ಎಂದು ಸಂಸದ ಅನಂತಕುಮಾರ್ ಹೆಗ್ಡೆ ಕಾರವಾರದ ಮೀನುಗಾರರ ವಿರುದ್ಧ ಕಿಡಿಕಾರಿದ್ದಾರೆ.
ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೋರಾಟ ವಿಚಾರವಾಗಿ ಕುಮಟಾದಲ್ಲಿ ಮಾತನಾಡಿದ ಸಂಸದರು, ಜನರಿಗೆ, ಊರಿಗೆ ಅಭಿವೃದ್ಧಿ ಬೇಕಾಗಿದೆ. ನಮ್ಮ ಮುಂದಿನ ತಲೆಮಾರಿಗೋಸ್ಕರ ಅಭಿವೃದ್ಧಿ ಬೇಕಾಗಿದೆ. ಶಾಶ್ವತವಾಗಿ ಅಧಿಕಾರದ ಖುರ್ಚಿ ಮೇಲೆ ಕುಳಿತುಕೊಳ್ಳಲು ನಾನು ಖಂಡಿತ ಬಂದಿಲ್ಲ. ಆದರೆ ಯಾವ ಹೆಜ್ಜೆ ಇಟ್ಟಿದ್ದೀನೋ ಅದನ್ನ ಮಾಡಿಯೇ ಹೋಗುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು
Advertisement
Advertisement
ಮಂಗಳೂರಿನಲ್ಲಿ, ಗೋವಾದಲ್ಲಿ ಬಂದರುಗಳು ಅಭಿವೃದ್ಧಿಯಾಗಿವೆ. ಅಲ್ಲಿನ ಮೀನುಗಾರರ ಬದುಕು ಹಾಳಾಗಿ ಹೋಗಿದೆಯಾ? ಸಾಗರಮಾಲಾ ಯೋಜನೆಯಿಂದ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
Advertisement
ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಕಾರವಾರ ತಾಲೂಕು ಬಂದ್ ಮಾಡಿದ್ದರು. ಅಷ್ಟೇ ಅಲ್ಲದೆ ಸಂಸದ ಅನಂತಕುಮಾರ್ ಹೆಗ್ಡೆ ಹಾಗೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿ ಹಾರ ಹಾಕಿದ್ದರು. ಜೊತೆಗೆ ಅನಂತಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ ಮುಖ ಹಾಗೂ ಶಾಸಕಿ ರೂಪಾಲಿ ನಾಯ್ಕ ಮುಖಕ್ಕೆ ಅನಂತಕುಮಾರ್ ಹೆಗ್ಡೆ ಭಾವ ಚಿತ್ರ ಅಂಟಿಸಿ ಪ್ರತಿಭಟನೆಯಲ್ಲಿ ಪ್ರದರ್ಶನ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
Advertisement
ಏನಿದು ಸಾಗರಮಾಲ? ಯೋಜನೆ ರೂಪರೇಷೆ ಏನು?
ಸಾಗರಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆ ಅಡಿ ಹಣ ಬಿಡುಗಡೆ ಮಾಡಿದೆ. ಸಾಗರಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.
ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.