ಪರೇಶ್ ಮೇಸ್ತಾ ಕೇಸ್ ಸಂಬಂಧ ಪ್ರಚೋದನಕಾರಿ ಭಾಷಣ – ಪ್ರಾಸಿಕ್ಯೂಷನ್ ಲೋಪ, ಶಿಕ್ಷೆಯಿಂದ ಅನಂತ್‍ಕುಮಾರ್ ಹೆಗಡೆ ಪಾರು

Public TV
3 Min Read
ananth kumar hegde

ಕಾರವಾರ: ಕೋಮು ಸೌಹಾರ್ದವನ್ನು ಕೆಡಿಸಿದ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯದಿಂದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆ ಶಿಕ್ಷೆಯಿಂದ ಪಾರಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಅನಂತ್‍ಕುಮಾರ್ ಹೆಗಡೆ ಭಟ್ಕಳದಲ್ಲಿ ಪರೇಶ್ ಮೇಸ್ತಾ ಪ್ರಕರಣ ಸಂಬಂಧಿಸಿದಂತೆ ಪ್ರಚೋದನಕಾರಿಯಾಗಿ ಮಾತನಾಡಿ ಎರಡು ಕೋಮುಗಳ ನಡುವೆ ಸಂಘರ್ಷ ಹುಟ್ಟಿಸುವ ವಾತಾವರಣ ಸೃಷ್ಟಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಎನ್. ಸಿದ್ದೇಶ್ವರ್ ಅವರು ಮಂಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಐಪಿಸಿ ಸೆಕ್ಷನ್ 153 ಹಾಗೂ ಜನಪ್ರತಿನಿಧಿ ಕಾಯ್ದೆ 125ರ ಅಡಿಯಲ್ಲಿ ದೂರು ದಾಖಲಿಸಿದ್ದರು.

Paresh Mesta

ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಹುಡ್ಡರ್ ಅವರು ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿಯ ಬಗ್ಗೆ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ನಡೆದುಕೊಂಡ ರೀತಿ ಬಗ್ಗೆ ಉಲ್ಲೇಖಿಸುತ್ತಾ, ಈ ಪ್ರಕರಣದ ದೂರುದಾರರನ್ನು ಹೊರತುಪಡಿಸಿದರೆ ಪ್ರಕರಣದ ಯಾವ ಸಾಕ್ಷಿಯೂ ಪ್ರಾಸಿಕ್ಯೂಷನ್ ಅನ್ನು ಬೆಂಬಲಿಸಿಲ್ಲ. ಎಲ್ಲರ ಉದ್ದೇಶ ಅನಂತ್‍ಕುಮಾರ್ ಹೆಗಡೆಯವರಿಗೆ ಸಹಾಯ ಮಾಡುವುದೇ ಆಗಿದೆ ಎಂಬಂತೆ ಕಂಡುಬಂದಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ವೈರುದ್ಯಗಳು ಹಾಗೂ ಲೋಪದೋಷಗಳು ಕಂಡುಬಂದಿದೆ. ಅಲ್ಲದೇ ಪ್ರಕರಣದ ಲೋಪದೋಷಗಳ ಬಗ್ಗೆ ಸಂಬಂಧಿಸಿದ ಸಾಕ್ಷಿಗಳಿಗೆ ಪ್ರಾಸಿಕ್ಯೂಷನ್ ಸರಿಯಾಗಿ ವಿವರಿಸಿಲ್ಲ. ಇಡೀ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎದ್ದು ಕಾಣುತ್ತದೆ. ಹೀಗಾಗಿ ಪ್ರಕರಣದಲ್ಲಿ ಆರೋಪಿಗೆ ಸಂಶಯದ ಲಾಭ ದೊರೆತಿದೆ. ಅಲ್ಲದೆ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಆರೋಪಿ ವಿರುದ್ಧ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

court 1

ಭಟ್ಕಳದಲ್ಲಿ ಅನಂತ್‍ಕುಮಾರ್ ಹೆಗಡೆ 2018ರ ಮೇ 7ರಂದು ಭಾಷಣ ಮಾಡಿದ ಬಗ್ಗೆ, 2018ರ ಮೇ 12ರಂದು ಸಂಸದರ ವಿರುದ್ಧ ದೂರು ದಾಖಲಿಸಲಾಗಿತ್ತು.

ವಿಡಿಯೋ ಮಾಡಿದ ಕ್ಯಾಮರಾಮನ್ ಪ್ರತಿಕೂಲ ಸಾಕ್ಷಿ:
ಈ ಪ್ರಕರಣದಲ್ಲಿ ಹೆಗಡೆರವರು ಪ್ರಚೋದನಕಾರಿ ಭಾಷಣವನ್ನು ಚುನಾವಣಾ ಆಯೋಗವೇ ನೇಮಕ ಮಾಡಿದ್ದ ವಿಡಿಯೋಗ್ರಾಫರ್ ರೆಕಾರ್ಡ್ ಮಾಡಿದ್ದರು. ಈ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು. ಆದರೇ ಸಾಕ್ಷಿಯಾಗಿ ಬಂದಿದ್ದ ವಿಡಿಯೋಗ್ರಾಫರ್ ತಾನು ಕೇವಲ ವಿಡಿಯೋ ರೆಕಾರ್ಡಿಂಗ್ ಮಾಡಿದ್ದೇನೆಯೇ ಹೊರತು ಅನಂತ್‍ಕುಮಾರ್ ಆಗ ಏನು ಹೇಳಿದ್ದರು ಎಂದು ಕೇಳಿಸಿಕೊಂಡಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾನೆ. ಈ ಪ್ರಕರಣದಲ್ಲಿ ಸಿಡಿ(ಕಾಂಪ್ಯಾಕ್ಟ್ ಡಿಸ್ಕ್)ನ್ನು ವಶಪಡಿಸಿಕೊಳ್ಳುವಾಗ ಹಾಜರಾಗಿದ್ದ ವ್ಯಕ್ತಿ ಪೊಲೀಸರು ಏನನ್ನು ವಶಪಡಿಸಿಕೊಂಡಿದ್ದಾರು ಎಂಬುದು ತನಗೆ ತಿಳಿದೇ ಇಲ್ಲ ಎಂದು ಸಾಕ್ಷಿ ಹೇಳಿದ್ದಾನೆ. ಅಲ್ಲದೇ ಆಗ ಚುನಾವಣಾ ಆಯೋಗ ನೇಮಕ ಮಾಡಿದ್ದ ಫ್ಲೈಯಿಂಗ್ ಸ್ಕ್ವಾಡ್ ಡಿವೈಎಸ್‍ಪಿ ನಾಗೇಶ್ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಮಂಜುನಾಥ್ ಸುಕ್ರು ಗೌಡ ಅವರು ಸಹ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ.

court

ನೆನಪಿಲ್ಲ ಎಂದ ಪೇದೆ:
ಈ ಪ್ರಕರಣದಲ್ಲಿ ಅನಂತ್‍ಕುಮಾರ್ ಹೆಗಡೆ ಭಾಷಣ ಮಾಡುವಾಗ ಅಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸ್ ಪೇದೆ ವಿಠ್ಠಲ್ ಗೌಡ, ಅನಂತ್‍ಕುಮಾರ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು ನಿಜ. ಆದರೆ ಏನು ಹೇಳಿದರು ಎಂಬುದು ನನಗೆ ನೆನಪಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಅನಂತ್‍ಕುಮಾರ್ ಅವರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪ್ರಕರಣ ಕೈ ಬಿಡುವಂತೆ ಕೋರಿದ್ದ ಸಂಸದ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್‍ಕುಮಾರ್ ಅವರು ನ್ಯಾಯಾಲಯಕ್ಕೆ ಕಳೆದ ಡಿಸೆಂಬರ್ ನಲ್ಲಿ ಪ್ರಕರಣ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪುರಸ್ಕರಿಸದ ನ್ಯಾಯಾಲಯ ಚಾರ್ಜ್‍ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ananth kumar

ಏನಿದು ಪರೇಶ್ ಮೇಸ್ತಾ ಪ್ರಕರಣ?
ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಪರೇಸ್ ಮೇಸ್ತಾ ನಗರದ ಶಟ್ಟಿಕೆರೆಯಲ್ಲಿ ಡಿಸೆಂಬರ್ 8 ರಂದು ಹೆಣವಾಗಿ ಪತ್ತೆಯಾಗಿದ್ದ. ನಿಗೂಢ ಸಾವಿನ ಕುರಿತು ತಂದೆ ಕಮಲಾಕರ್ ಮೇಸ್ತಾ ರವರು ಶವ ಪತ್ತೆಯಾದ ಡಿಸೆಂಬರ್ 8 ರಂದೇ ಐದು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದರು. ಪರೇಶ್ ಮೆಸ್ತಾ ಸಾವು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೇ ಹಲವು ಭಾಗದಲ್ಲಿ ಘರ್ಷಣೆಗೆ ಕಾರಣವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *