Connect with us

Bengaluru City

ಸರ್ಕಾರ ಹೋದ್ರೆ ಬೇರೆ ಸರ್ಕಾರ ಬರುತ್ತೆ, ನನ್ನ ಪತಿ ಹೋದ್ರೆ – ಕೈ ನಾಯಕರಿಗೆ ಆನಂದ್ ಸಿಂಗ್ ಪತ್ನಿ ಕ್ಲಾಸ್

Published

on

ಬೆಂಗಳೂರು: ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆಯಲು ಪಕ್ಷದ ಶಾಸಕರನ್ನು ಬಿಡದಿಯ ಈಗಲ್ಟನ್ ರೆಸಾರ್ಟಿಗೆ ಕರೆದೊಯ್ದ ಕಾಂಗ್ರೆಸ್ ನಾಯಕರಿಗೆ ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ತಲೆನೋವಾಗಿ ಪರಿಣಮಿಸಿದೆ.

ವಿಧಾನಸಭಾ ಅಧಿವೇಶನಕ್ಕೆ ಗೈರು ಹಾಜರಿ ಆಗಿದ್ದ ಬಂಡಾಯ ಶಾಸಕರ ಮನವೊಲಿಕೆ ಕಾರ್ಯ ಒಂದೆಡೆಯಾದರೆ, ಶಾಸಕ ಗಣೇಶ್ ಹಲ್ಲೆ ಪ್ರಕರಣದಲ್ಲಿ ಆನಂದ್ ಸಿಂಗ್ ಅವರ ಮನವೊಲಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಆದರೆ ಕಾಂಗ್ರೆಸ್ ನಾಯಕರ ಸಂಧಾನ ಪ್ರಕ್ರಿಯೆಗೆ ಶಾಸಕ ಆನಂದ್ ಸಿಂಗ್ ಕುಟುಂಬ ಒಪ್ಪಿಗೆ ನೀಡದೇ ಗಣೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಘಟನೆ ಸಂಬಂಧ ಶಾಸಕ ಆನಂದ್ ಸಿಂಗ್ ಅವರ ಪತ್ನಿಯನ್ನು ಕಾಂಗ್ರೆಸ್ ನಾಯಕರು ಮನವೊಲಿಸಲು ಪ್ರಯತ್ನ ನಡೆಸಿದ್ದು, ಪ್ರಕರಣ ನಡೆದ ದಿನದಿಂದಲೂ ಕೂಡ ಸಚಿವ ಜಮೀರ್ ಅಹ್ಮದ್ ಅವರು ಈ ಕಾರ್ಯದಲ್ಲೇ ತೊಡಗಿದ್ದರು. ಆದರೆ ಈ ವೇಳೆ ಆನಂದ್ ಸಿಂಗ್ ಅವರ ಪತ್ನಿ ಲಕ್ಷ್ಮಿ ಸಿಂಗ್ ಅವರ ರೌದ್ರಾವತಾರಕ್ಕೆ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೊಂದು ಸರಿ ಕ್ಷಮಿಸಿ ಬಿಡಿ. ಇದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಕೇಳಿಕೊಂಡರೂ ಕೇರ್ ಮಾಡದ ಪತ್ನಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ರೀತಿಯಲ್ಲಿ ಈ ಘಟನೆಯನ್ನು ತೆಗೆದುಕೊಂಡಿದ್ದಾರೆ.

ಇದು ನನ್ನ ಗಂಡನ ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಸರ್ಕಾರ ಹೋದರೆ ಬೇರೆ ಸರ್ಕಾರ ಬರುತ್ತೆ. ಆದರೆ ನನ್ನ ಗಂಡ ಹೋದರೆ ಬೇರೆ ಗಂಡನನ್ನು ತರಲು ಆಗುತ್ತಾ ಎಂದು ಕೈ ನಾಯಕರ ಮುಖಕ್ಕೆ ಹೊಡೆದಂತೆ ಪ್ರಶ್ನಿಸಿದ್ದಾರೆ. ಅಲ್ಲದೇ ರಾಜಕೀಯವೇ ಬೇರೆ ಈ ಘಟನೆಯೇ ಬೇರೆ. ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆ ಗಣೇಶ್‍ನನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಶಾಸಕ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರ ಮಾತಿಗೆ ಒಪ್ಪಿಗೆ ನೀಡಿದ್ದರೂ ಲಕ್ಷ್ಮಿ ಸಿಂಗ್ ಮತ್ತು ಅವರ ಕುಟುಂಬ ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ. ಪ್ರಕರಣದಲ್ಲಿ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಸಂಧಾನ ಮಾಡಿ ಗಣೇಶ್‍ರನ್ನು ಪಕ್ಷಕ್ಕೆ ಮತ್ತೆ ಕರೆತರುವ ಉದ್ದೇಶ ಕಾಂಗ್ರೆಸ್ ನಾಯಕರಿಗೆ ಇತ್ತು. ಅಲ್ಲದೇ ಶಾಸಕ ಗಣೇಶ್ ಕೂಡ ಸಂಧಾನ ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಲಕ್ಷ್ಮಿ ಸಿಂಗ್ ಅವರ ಖಡಕ್ ಮಾತಿಗೆ ಕೈ ನಾಯಕರು ಏನು ಮಾತನಾಡದೇ ಈಗ ಮೌನಕ್ಕೆ ಜಾರಿದ್ದು ಮುಂದೆ ಏನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *