ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಗಳ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಅವರು ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಸ್ಪೀಕರ್ ಅವರಿಗೆ ರಾಜೀನಾಮೆಯನ್ನು ನೀಡಿದ್ದು, ಬೇಕಾದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದರು. ಈ ವೇಳೆ ತಮ್ಮ ರಾಜೀನಾಮೆ ನಿರ್ಧಾರದ ಕಾರಣವನ್ನು ತಿಳಿಸಲು ಇಚ್ಛಿಸದ ಅವರು, ನಾನು ಸದ್ಯ ರಾಜ್ಯಪಾಲರ ಭೇಟಿಗೆ ಆಗಮಿಸಿದ್ದೇನೆ. ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.
Advertisement
Advertisement
ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಹಲವು ಅನುಮಾನಗಳು ಮೂಡಿದೆ. ಇತ್ತ ಸರ್ಕಾರ ಜಿಂದಾಲ್ ಸಂಸ್ಥೆ ಭೂಮಿ ಮಂಜೂರು ಮಾಡುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಕುರಿತ ಸುದೀರ್ಘ ಪತ್ರವನ್ನು ಜೂನ್ 27 ರಂದು ಗೃಹ ಸಚಿವರಾದ ಎಂಬಿ ಪಾಟೀಲ್ ಅವರಿಗೆ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಪತ್ರದಲ್ಲಿ ಜಿಂದಾಲ್‍ಗೆ ಭೂಮಿ ವಿವಾದ ನೀಡುವ ಸರ್ಕಾರ ಮುಂದಾಗಿರುವ ಬಗ್ಗೆ ಪ್ರಸ್ತಾಪಿಸಿರುವ ಆನಂದ್ ಸಿಂಗ್ ಅವರು, ಈ ಕುರಿತು ಚರ್ಚೆ ನಡೆಸಲು ಸರ್ಕಾರ ನೇಮಿಸಿರುವ ಸಚಿವ ಸಂಪುಟ ಉಪಸಮಿತಿಯ ಕ್ರಮವನ್ನು ಸ್ವಾಗತ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ತಾವು ಕ್ಷೇತ್ರದ ರೈತರ ಹಾಗೂ ಯುವಕರ ಪರ ಇದ್ದು, ಅವರ ಭವಿಷ್ಯದ ದೃಷ್ಟಿಯಿಂದ ಹಲವು ಚರ್ಚೆಗಳನ್ನು ನಡೆಸಿ ಮಾಹಿತಿ ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ.
Advertisement
ಪತ್ರದಲ್ಲಿ ಏನಿದೆ?
ಈಗಾಗಲೇ ಬಳ್ಳಾರಿ ಜಿಲ್ಲೆ ಗಣಿಗಾರಿಕೆಯಿಂದ ನಲುಗಿ ಹೋಗಿದೆ. ಈ ಹಿಂದೆಯೂ ಹಲವು ಸಂಸ್ಥೆಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಸುವ, ಅಭಿವೃದ್ಧಿಯ ಆಸೆಯನ್ನು ತೋರಿಸಿ ಸರ್ಕಾರದ ವತಿಯಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇಂದು ಕೂಡ ಇದೇ ಹಿನ್ನೆಲೆಯಲ್ಲಿ ಭೂಮಿ ಪಡೆದುಕೊಳ್ಳುವ ಸಂಚು ನಡೆಸಲಾಗುತ್ತಿದೆ. ಈಗಾಗಲೇ ಜಿಂದಾಲ್ 11 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡಿದ್ದು, ಈ ಭೂಮಿಯ ಸ್ಥಿತಿ ಗತಿಗಳ ಬಗ್ಗೆ ಸದನ ಉಪಸಮಿತಿಯಲ್ಲಿ ಪರಿಶೀಲನೆ ನಡೆಸಬೇಕಿದೆ. ಅಲ್ಲದೇ 11 ಸಾವಿರ ಎಕರೆ ಪ್ರದೇಶ ಪಡೆದ ಮೇಲೂ ಮತ್ತೆ 3667 ಎಕರೆ ಭೂಮಿ ಪಡೆಯುವ ಅಗತ್ಯ ಏನಿದೆ ಎಂಬ ಪ್ರಶ್ನೆ ಉದ್ಭವಾಗಿದೆ.
ಈಗಾಗಲೇ ನೀಡಿರುವ 11 ಸಾವಿರ ಎಕರೆ ಪ್ರದೇಶದಲ್ಲೇ ಈಗ ಪಡೆಯುತ್ತಿರುವ 3667 ಎಕರೆ ಬಂದರೆ ಅದನ್ನು ಲೀಸ್ ನಲ್ಲಿಯೇ ಮುಂದುವರಿಸಬಹುದು. ಆದರೆ ಈಗ ಅದನ್ನು ಶುದ್ಧ ಕ್ರಯಕ್ಕೆ ಪಡೆಯುತ್ತಿರುವುದು ಏಕೆ? ಈಗಾಗಲೇ ನನಗೆ ಲಭಿಸಿರುವ ಮಾಹಿತಿ ಅನ್ವಯ ಜಿಂದಾಲ್ ಸಂಸ್ಥೆ 11 ಸಾವಿರ ಎಕರೆ ಭೂ ಪ್ರದೇಶಕ್ಕಿಂತ ಹೆಚ್ಚಿನ ಭೂಮಿಯನ್ನು ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವ ಅಗತ್ಯ ಏನಿದೆ? ಸಮ್ಮಿಶ್ರ ಸರ್ಕಾರ ವಿರುದ್ಧ ವಿರೋಧಿ ಪಕ್ಷಗಳಿಂದ ಕೇಳಿ ಬಂದಿರುವ ಆರೋಪಗಳಿಗೆ ಪಕ್ಷ ನಾಯಕರು ನೀಡುತ್ತಿರುವ ಸಮರ್ಥನೆಯೂ ನನಗೆ ಬೇಸರ ತರಿಸಿದೆ. ಅಧಿಕಾರ ಉಳಿಸಿಕೊಳ್ಳಲು ಕೆಲವರು ಈ ರೀತಿ ಮಾತನಾಡುತ್ತಿರುವುದು ಬೇಸರ ತಂದಿದೆ. ಕಾರ್ಖಾನೆಯಿಂದ ಈಗ ಜಿಲ್ಲೆಯ ಜನತೆಗೆ ಆಗಿರುವ ಅನಾನುಕೂಲಗಳೇ ಹೆಚ್ಚಾಗಿದೆ. ಜಿಲ್ಲೆಯಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುವ ಜಿಂದಾಲ್ ಸಂಸ್ಥೆ 11 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಕೇವಲ 10 ಕೋಟಿ ರೂ.ಗಳಷ್ಟೇ ಖರ್ಚು ಮಾಡಿದೆ. ಜಿಂದಾಲ್ ಸಂಸ್ಥೆ ಜಿಲ್ಲೆಯನ್ನು ಖಬ್ಜಕ್ಕೆ ತೆಗೆದುಕೊಂಡಂತೆ ಭಾಸವಾಗುತ್ತಿದೆ.
ರಾಜ್ಯದಲ್ಲಿ ಹಲವು ಸಂಸ್ಥೆಗಳು ಇದೇ ರೀತಿ ಮಾಡಿಕೊಂಡು ಸರ್ಕಾರದಿಂದ ಭೂಮಿಯನ್ನು ಪಡೆದುಕೊಂಡಿದೆ. ಆದರೆ ಆ ಬಳಿಕ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ಕೈಗಾರಿಕಾ ಉದ್ದೇಶದಿಂದ ಪಡೆದ ಭೂಮಿಯನ್ನ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡುತ್ತಿದೆ ಎಂಬ ಮಾಹಿತಿ ಇದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಮನವಿ ಮಾಡಿದ್ದಾರೆ. ತಮ್ಮ ನಿರ್ಧಾರಕ್ಕೆ ಜಿಲ್ಲೆಯ ರಾಜ್ಯಸಭಾ ಸದಸ್ಯರು, ಜನಪ್ರತಿನಿಧಿಗಳು ಕೂಡ ಸಮ್ಮತಿ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಇಡೀ ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.