ಬೆಂಗಳೂರು: ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೆ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಅಖಾಡಕ್ಕಿಳಿದಿದ್ದು, ಆನಂದ್ ಸಿಂಗ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಆದರೆ, ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸಹ ಟಿವಿಯಲ್ಲಿ ನೋಡಿದೆ. ಸುದ್ದಿ ನೋಡಿ ಆಘಾತವಾಯಿತು. ಆನಂದ್ ಸಿಂಗ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇನೆ. ಮೊಬೈಲ್ ಸ್ವಿಚ್ ಆಫ್ ಆಗಿದೆ, ಸಂಪರ್ಕಕ್ಕೆ ಸಿಗುತ್ತಿಲ್ಲ. ನಿನ್ನೆ ಆನಂದ್ ಸಿಂಗ್ ನನ್ನ ಭೇಟಿಗೆ ಪ್ರಯತ್ನಿಸಿರಬಹುದು. ಆದರೆ ನನಗೆ ಹೊಟ್ಟೆ ನೋವಿದ್ದ ಕಾರಣ ಆಸ್ಪತ್ರೆಯಲ್ಲಿದ್ದೆ ಹೀಗಾಗಿ ನನಗೆ ಮಾಹಿತಿ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಇತ್ತೀಚೆಗೆ ಆನಂದ್ ಸಿಂಗ್, ಡಿ.ಕೆ.ಶಿವಕುಮಾರ್ ಅವರಿಂದಲೂ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ವಿಶ್ವಾಸಮತಯಾಚನೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರೇ ಆನಂದ್ ಸಿಂಗ್ ಅವರನ್ನು ಹೋಟೆಲಿನಿಂದ ಕರೆ ತಂದು ಮನವೊಲಿಸಿದ್ದರು. ಈಗಲೂ ಸಹ ಆನಂದ್ ಸಿಂಗ್ ಮನವೊಲಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
Advertisement
Advertisement
ರಾಜೀನಾಮೆಗೂ ಮುನ್ನ ನಿನ್ನೆ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆನಂದ್ ಸಿಂಗ್ ತಮ್ಮ ನೋವು ತೋಡಿಕೊಂಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ, ಐಟಿ, ಇಡಿ ತನಿಖೆಯ ಪ್ರಕರಣಗಳ ತನಿಖೆ ಕುರಿತು ಬಗ್ಗೆ ಚರ್ಚಿಸಿದ್ದರು. ಕೇಸ್‍ಗಳ ವಿಚಾರಣೆ ಕುರಿತು ತಮಗಿರುವ ಆತಂಕದ ಬಗ್ಗೆ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದರು. ಅನಿವಾರ್ಯವಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸಹ ಹೇಳಿದ್ದರು. ಈ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಆನಂದ್ ಸಿಂಗ್‍ಗೆ ಧೈರ್ಯತುಂಬಿ ಮನವೊಲಿಕೆಗೆ ಯತ್ನಿಸಿದ್ದರು. ಏನಾಗುತ್ತೋ ನೋಡಿ ಮುಂದಿನ ನಿರ್ಧಾರ ಕೈಗಳ್ಳುತ್ತೇನೆ ಎಂದು ಹೇಳಿ ಆನಂದ್ ಸಿಂಗ್ ಬೇಸರದಿಂದ ಡಿಕೆಶಿ ನಿವಾಸದಿಂದ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಅಮೆರಿಕದಿಂದಲೇ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ ಸಿಎಂ, ಆನಂದ್ ಸಿಂಗ್ ರಾಜೀನಾಮೆಯಿಂದ ವಿಚಲಿತರಾಗಿದ್ದಾರೆ. ಹೀಗಾಗಿ ಹೇಗಾದರೂ ಆನಂದ್ ಸಿಂಗ್ ಮನವೊಲಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆನಂದ್ ಸಿಂಗ್ ಜೊತೆ ಮಾತನಾಡಿ, ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡುತ್ತೇನೆ. ನೀವು ಚಿಂತಿಸಬೇಡಿ ಎಂದು ಸಿಎಂ ಅವರಿಗೆ ಸಚಿವ ಡಿ.ಕೆ.ಶಿವಕುಮಾರ್ ಧೈರ್ಯ ತುಂಬಿದ್ದಾರೆ. ಆನಂದ್ ಸಿಂಗ್ ಮನವೊಲಿಕೆ ಹೊಣೆಯನ್ನು ಸಿಎಂ ಡಿಕೆಶಿ ಮೇಲೆ ಹೊರಿಸಿದ್ದಾರೆ.