– ರವೀಶ ಎಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ
ಇದು ನನ್ನ ಮಗ ರಾಕೇಶ್ ರೂಂ.. ಮುಖದ ಮೇಲೆ ಕೈ ಆಡಿಸುತ್ತಾ ಆ ಕಡೆ ಈ ಕಡೆ ನೋಡುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ. ರೂಂ ಮೂಲೆಯಲ್ಲಿ ರಾಕೇಶ್ ಫೋಟೋ ಕೂಡ ಇತ್ತು. ಆ ಕೊಠಡಿಯ ಎಲ್ಲ ಕಡೆ ಒಂದು ಕ್ಷಣ ಕಣ್ಣಾಡಿಸಿ ಬಿಟ್ಟರು. ಕ್ಷಣಕ್ಕಷ್ಟೇ ಮೌನವಾದರು.. ಆ ಬಳಿಕ ಇನ್ನೊಂದು ಫೋಟೋ ನೋಡಿದರು. ಓಹೋ.. ಇದು ಆ ಫೋಟೋ.. ನಾನು ಕಾಂಗ್ರೆಸ್‌ಗೆ ಸೇರಿದಾಗ ತೆಗೆದ ಫೋಟೋ. ಮೈಸೂರು ಕಾಂಗ್ರೆಸ್ ಆಫೀಸ್‌ಗೆ ಹೋಗಿದ್ದೆ ಆಗ ತೆಗೆದಿದ್ದು ಎನ್ನುತ್ತಾ ಸಿದ್ದರಾಮಯ್ಯ ಮೊಗದಲ್ಲಿ ಗೆದ್ದ ನಗು ಎದ್ದು ಕಾಣ್ತಿತ್ತು. ಅಂದಹಾಗೆ ಇದೆಲ್ಲ ಕಂಡಿದ್ದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಂದರ್ಶನಕ್ಕೂ ಮುನ್ನ. ಮೈಸೂರಿನ ಶಾರದಾದೇವಿನಗರದಲ್ಲಿ ಈಗ ಇರುವ ಮನೆಯ ಮೂರನೇ ಮಹಡಿಯ ಸಂದರ್ಶನಕ್ಕಾಗಿ ಸೆಟ್ ಮಾಡಲಾಗಿತ್ತು. ಅಪರೂಪಕ್ಕೆ ಎಂಬಂತೆ ಆ ಕೊಠಡಿಗೆ ಸಿಎಂ ಸಿದ್ದರಾಮಯ್ಯ ಬಂದಾಗ ಅವರಲ್ಲಿ ಕಂಡುಬಂದ ಭಾವನಾತ್ಮಕ ಕ್ಷಣಗಳು. ಸಿದ್ದರಾಮಯ್ಯನಹುಂಡಿ ಎಂಬ ಗ್ರಾಮದಿಂದ ಬಂದು ಲಾಯರ್ ಆಗಿ, ಅಲ್ಲಿಂದ ರಾಜಕೀಯಕ್ಕೆ ಬಂದು ರಾಜಕಾರಣದಲ್ಲಿ ಸಕ್ಸಸ್ ಕಂಡಿದ್ದೇ ಒಂದು ಮೈಲಿಗಲ್ಲು. ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಆಗುವುದು ಸಾಧನೆ ಅಲ್ಲದೆ ಮತ್ತೇನು.? ಆದರೆ ಅದೇ ಸಿದ್ದರಾಮಯ್ಯಗೆ ಕಡೆಯ ರಾಜಕೀಯ ಕಾಲಘಟ್ಟದಲ್ಲಿ ನಿರೀಕ್ಷಿಸಲಾಗದ ಅಲೆಯೊಂದು ಅಪ್ಪಳಿಸಿತು. ಭೂಮಿ ಮೇಲೆ ಆಸೆಯೇ ಇಲ್ಲ ಎಂದು ಸಾರ್ವಜನಿಕವಾಗಿ ನಡವಳಿಕೆ ತೋರಿದ್ದವರು ಸೈಟುಗಳಿಗಾಗಿಯೇ ಉರುಳು ಸುತ್ತಿಸಿಕೊಂಡಿದ್ದೇ ಒಂದು ಅಘಾತದ ಸಂಗತಿ.
Advertisement
Advertisement
ನನ್ನ ಹತ್ತಿರ ನೆಟ್ಟಗೆ ಮನೆ ಇಲ್ಲ. ಎರಡು ಮನೆ ಮಾರಿಬಿಟ್ಟೆ.. ಮೈಸೂರಿನಲ್ಲಿ ಈಗ ಒಂದು ಮನೆ ಕಟ್ಟುತ್ತಿದ್ದೇನೆ. ಅದು ಮೂರು ವರ್ಷದಿಂದ ಮನೆ ಕಟ್ಟುತ್ತಿದ್ದೇನೆ. ಮಗ ಒಂದು ತೋಟ ಮಾಡಿದ್ದಾನೆ. ಮೈಸೂರಿನ ಕೂಡನಹಳ್ಳಿ ಹತ್ತಿರ 7-8 ಎಕರೆ ತೋಟ ಇದೆ. ಅದು ಮನೆಯಿಂದ ಪಾಲು ಬಂದಿದ್ದು ಅಷ್ಟೇ. ಇಷ್ಟು ಬಿಟ್ಟರೆ ನನ್ನ ಹತ್ತಿರ ಏನೇ ಇದ್ದರೂ ತೆಗೆದುಕೊಳ್ಳಲಿ. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಶುರು ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೊರಗೆ ಕಾಣಿಸಿಕೊಳ್ಳದೇ, ಇಲ್ಲಿ ತನಕ ಎಲ್ಲಿಯೂ ವೇದಿಕೆ ಹಂಚಿಕೊಳ್ಳದೇ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಫೋಟೋ ನೋಡಿದ್ದೀರಾ ಎಂದು ಕೇಳುವಷ್ಟು ಅಂತರ ಕಾಯ್ದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದೇ ಪತ್ನಿ ವಿಚಾರದಲ್ಲಿ ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಿರುವುದು ಸಿದ್ದರಾಮಯ್ಯಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಮೊದಲು ಪುತ್ರನ ವಿಡಿಯೋ ಒಂದು ಹೊರಗೆ ಬಂದು ವರ್ಗಾವಣೆ ದಂಧೆಯ ಆರೋಪ ಕೇಳಿಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ಮಾತನಾಡಿದ್ದ ವಿಡಿಯೋ ವರ್ಗಾವಣೆಯದ್ದು ಅಲ್ಲ, ಸಿಎಸ್‌ಆರ್ ಫಂಡ್ ಮಾತುಕತೆ ಅಂತಾ ಸಮರ್ಥಿಸಿಕೊಂಡಿದ್ದರು. ಆಗ ಪುತ್ರನ ವಿಡಿಯೋ ಪ್ರಕರಣದ ಮುಜುಗರವಾದ್ರೆ, ಈಗ ಪತ್ನಿ ಸೈಟು ಪಡೆದಿರುವ ಅಕ್ರಮ ಆರೋಪ ಸಿದ್ದರಾಮಯ್ಯಗೆ ಭಾವನಾತ್ಮಕವಾಗಿ ಬಹುದೊಡ್ಡ ಹೊಡೆತ. ಆ ಕಾರಣಕ್ಕಾಗಿಯೇ ಮೈಸೂರಿನ ಸಮಾವೇಶದಲ್ಲಿ ಪತ್ನಿ ವಿಚಾರವಾಗಿಯೂ ಭಾವನಾತ್ಮಕವಾಗಿ ಮಾತನಾಡಿಬಿಟ್ಟರು. ನನ್ನ ಧರ್ಮಪತ್ನಿ ಪಾರ್ವತಿ ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ ಎಂದು ಪ್ರಶ್ನೆ ಕೇಳಿ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದು ಇದೇ ವೇದಿಕೆಯಲ್ಲಿ. ಅದೇ ವೇದಿಕೆಯಲ್ಲಿ ಮಾರನೇ ದಿನ ಎಮೋಷನಲ್ ಕಾರ್ಡ್‌ಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟುಬಿಟ್ಟರು. ನಿಮ್ಮ ಪತ್ನಿ ಬಗ್ಗೆ ನಾವು ಮಾತಾಡ್ತಿಲ್ಲ. ನಿಮ್ಮ ಪತ್ನಿ ಸೈಟುಗಳನ್ನ ಪಡೆದಿರುವ ಮಾರ್ಗದ ಬಗ್ಗೆ ನಮ್ಮ ತಕರಾರು ಎನ್ನುವ ಮೂಲಕ ರಾಜಕೀಯ ಹೋರಾಟವೇ ಎಂಬ ಸಂದೇಶ ರವಾನಿಸಿದ್ದಾರೆ.
Advertisement
Advertisement
ಇದೆಲ್ಲವನ್ನೂ ನೋಡಿದಾಗ ಮುಡಾದಲ್ಲಿ ಪತ್ನಿ ಪಾರ್ವತಿಗೆ 50:50 ಪರಿಹಾರ ರೂಪದ 14 ಸೈಟುಗಳ ಹಂಚಿಕೆ ಅಕ್ರಮ ಎಂಬ ಆರೋಪದ ರಾಡಿ ಬಳಿಕ ಸಿದ್ದರಾಮಯ್ಯ ಬೇಸರ ಆಗಿರುವುದು ಸ್ಪಷ್ಟವಾಗುತ್ತೆ. ಯಾವುದಕ್ಕೆ ನನಗೆ ಆಸೆ ಇಲ್ಲ ಎನ್ನುತ್ತಿದ್ದೆನೋ, ಅದೇ ಭೂಮಿ ವಿಚಾರದಲ್ಲಿ ಮಸಿ ಬಳಿಯುವ ಯತ್ನ ನಡೆದುಹೋಯ್ತಲ್ಲ ಎಂಬ ನೋವು ಸಿದ್ದರಾಮಯ್ಯರನ್ನ ಕಾಡದೇ ಇರಲಾರದು. ಆ ಕಾರಣಕ್ಕಾಗಿಯೇ ಮುಡಾ ಕೊಟ್ಟಿರುವ ಸೈಟ್‌ಗಳನ್ನ ವಾಪಸ್ ಕೊಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಟೇಕ್ ಇಟ್ ಬ್ಯಾಕ್.. ಆದ್ರೆ ಪತ್ನಿಗೆ ಕೊಡಬೇಕಾದ ಪರಿಹಾರವನ್ನು ಕಾನೂನು ರೂಪದಲ್ಲೇ ಕೊಡಲಿ ಎಂಬ ಹೊಸ ಸೂತ್ರ ಬಿಟ್ಟಿದ್ದಾರೆ. ಆದ್ರೆ ದೇಸಾಯಿ ವಿಚಾರಣಾ ಆಯೋಗದ ತನಿಖೆ ಇರುವಾಗ, ರಾಜ್ಯಪಾಲರ ಬಳಿ ಪ್ರಾಸಿಕ್ಯೂಶನ್ ಅನುಮತಿ ಕೊಡಬೇಕೋ..? ಬೇಡವೋ..? ಎಂಬ ವಿಚಾರ ಇರುವ ಹಂತದಲ್ಲಿ ಕಾನೂನಾತ್ಮಕವಾಗಿ ವಾಪಸ್ ಕೊಡಬಹುದಾ ಎಂಬ ಪ್ರಶ್ನೆಯೂ ಎದುರಾಗಿದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾದುನೋಡಲು ಮುಂದಾಗಿದ್ದಾರೆ ಅನ್ನಿಸುತ್ತೆ. ಸಿವಿಲ್ ವ್ಯಾಜ್ಯ.. ಕ್ರಿಮಿನಲ್ ವ್ಯಾಜ್ಯಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ರಾಜಕಾರಣವೇ ಹಾಗೆ ಯಾವುದನ್ನ ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸುತ್ತೆ. ಆ ರಾಜಕಾರಣವನ್ನ ಎಲ್ಲರೂ ಎಲ್ಲ ಕಾಲಕ್ಕೂ ಮಾಡಿದ್ದಾರೆ. ಮುಂದೆಯೂ ಮಾಡಿಯೇ ಮಾಡುತ್ತಾರೆ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಎಷ್ಟಿತ್ತು.. ಎಷ್ಟಿರಲಿಲ್ಲ..? ಯಾರದ್ದು ಸರಿ..? ಯಾರದ್ದು ತಪ್ಪು.. ಎಷ್ಟಿದೆ.? ಎಂಬ ಸತ್ಯಾಸತ್ಯತೆ ತನಿಖೆಯಿಂದ ಹೊರಬರುತ್ತೆ.
ಇವರದ್ದೇ ಸರಿ.. ಇವರದ್ದೇ ತಪ್ಪು ಎಂದು ತೀರ್ಪು ನೀಡುವ ವಿಶ್ಲೇಷಣೆ ಅಗತ್ಯ ಇಲ್ಲ. ಆದರೆ ಆಕ್ಷನ್‌ಗೆ ರಿಯಾಕ್ಷನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಧಾನಗತಿಯ ಹೆಜ್ಜೆ ಇಟ್ಟಿದ್ದರ ಬಗ್ಗೆ ಸಾಕಷ್ಟು ಚರ್ಚೆ ನಡೆದುಹೋಗಿದೆ. ಸೈಟುಗಳ ಅಕ್ರಮ ಹಂಚಿಕೆ ಆರೋಪ ಕೇಳಿಬಂದಾಗ ಇಷ್ಟು ದೊಡ್ಡ ಮಟ್ಟಕ್ಕೆ ಆ ಹೋರಾಟವನ್ನ ತೆಗೆದುಕೊಂಡು ಹೋಗ್ತಾರೆ ಅಂದುಕೊಂಡಿರಲಿಲ್ಲ ಅನ್ನಿಸುತ್ತೆ. ಅಲ್ಲದೆ ಆ 14 ಸೈಟ್‌ಗಳನ್ನು ವಾಪಸ್ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲದಲ್ಲಿದ್ದರು ಎನ್ನುವುದು ಸ್ಪಷ್ಟವಾಗುತ್ತೆ. ಆ ಕಾರಣಕ್ಕಾಗಿಯೇ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟದ ಕಿಚ್ಚು ನಿಧಾನಗತಿಯಲ್ಲಿ ಹಬ್ಬುತ್ತಿದ್ದರೂ ಸಿದ್ದರಾಮಯ್ಯ ಮುಂದೆ ನೋಡೋಣ ಎಂಬ ಮನಸ್ಥಿತಿಗೆ ಬಂದುಬಿಟ್ಟರೇನೋ… ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದಾಗ ಸಿದ್ದರಾಮಯ್ಯ ಹಿಂದೇಟು ಹಾಕಬಾರದಿತ್ತು. ವಿಧಾನಸಭೆಯಲ್ಲಿ ಮಾತಿನಲ್ಲೂ, ಅನುಭವದಲ್ಲಿ ವಿಪಕ್ಷಗಳನ್ನ ಎದುರಿಸುವ ತಾಕತ್ತು ಸಿದ್ದರಾಮಯ್ಯಗೆ ಇತ್ತು. ಆದರೆ ಪತ್ನಿ ಪಾರ್ವತಿ ಪಡೆದಿರುವ ಸೈಟು ವಿಚಾರವಾಗಿ ಚರ್ಚೆ ನಡೆದು ಕಡತಕ್ಕೆ ಹೋಗುವುದು, ಮತ್ತಷ್ಟು ರಾಡಿ ಆಗುವುದು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ ಎಂಬ ಮಾತಿತ್ತು. ಆ ಕಾರಣಕ್ಕಾಗಿಯೇ ಚರ್ಚೆ ಬೇಡ ಎಂಬ ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಮುನ್ನುಡಿ ಬರೆದುಬಿಟ್ಟರು. ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ-ಜೆಡಿಎಸ್ ಎರಡು ಹಂತದ ಹೋರಾಟದ ಪ್ಲ್ಯಾನ್ ಮಾಡಿ ಬೆಂಗಳೂರಿನಿಂದ ಮೈಸೂರು ತನಕ ಸಿದ್ದರಾಮಯ್ಯ ವಿರುದ್ಧ ಹೆಜ್ಜೆ ಹಾಕಿ ಇನ್ನಷ್ಟು ರಾಡಿ ಮಾಡಿಬಿಟ್ಟರು. ವಿಧಾನಸಭೆಯಲ್ಲಿ ಚರ್ಚೆ ನಡೆಸಿ ರಾಜಕೀಯ ಅಸ್ತ್ರ ಪ್ರಯೋಗಿಸಿದ್ರೆ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಮಾಡಿ ಉತ್ತರ ಕೊಡಬೇಕಾದ ಅನಿವಾರ್ಯತೆಯೇ ಬರುತ್ತಿರಲಿಲ್ಲ.
ಒಂದೂಕಾಲು ವರ್ಷಕ್ಕೆ ಕಾಂಗ್ರೆಸ್ ಸರ್ಕಾರ ಎರಡು ಪ್ರಮುಖ ಅಕ್ರಮ ಆರೋಪಗಳ ಕುಣಿಕೆ ಸಿಗುತ್ತೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ನಾಯಕತ್ವ ವಿಪಕ್ಷಗಳಿಂದ ಇಂತಹ ಹೋರಾಟ ಎದುರಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಹಾಗಾದ್ರೆ ಇದು ರಾಜಕೀಯ ಬದಲಾವಣೆಗೆ ಸಾಕ್ಷಿ ಆಗುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎನ್ನಬಹುದು. ಆದರೆ ಯಾರ ಮೇಲಾದಾರೂ ಪರಿಣಾಮ ಬೀರುತ್ತೆ ಎಂದರೆ ಖಂಡಿತವಾಗಿ ಕೆಲವರಿಗೆ ಲಾಭ-ನಷ್ಟದ ಹಾರ ಬೀಳುತ್ತೆ. ಸಿಎಂ ಸಿದ್ದರಾಮಯ್ಯ ಪರ ನಾನು ಇದ್ದೇನೆ, ನಾನು ಬಂಡೆ ಆಗಿದ್ದೇನೆ ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಲೋಗನ್. ಬೆಂಗಳೂರಿನಿಂದ ಮೈಸೂರಿನ ತನಕ ನಾಲ್ಕೈದು ಸಮಾವೇಶಗಳಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅಬ್ಬರಿಸಿದ್ದು ಡಿಕೆಶಿ. ನನ್ನ ಕುಮಾರಸ್ವಾಮಿ ನಡುವಿನ ಯುದ್ಧ ಎಂದು ಬಿಂಬಿಸಿಕೊಳ್ಳುವ ರೀತಿಯಲ್ಲಿ ನಡೆದ ತಂತ್ರದಲ್ಲಿ ಡಿಕೆಶಿ ಯಶಸ್ವಿ ಬಗ್ಗೆ ಲೆಕ್ಕಚಾರವೂ ನಡೆದಿದೆ. ಅಷ್ಟೇ ಅಲ್ಲದೆ ಮುಂದಿನ ಗುರಿ, ಗೆರೆ ಸ್ಪಷ್ಟವಾಗಿಸಿಕೊಳ್ಳಲು ಡಿಕೆಶಿಯ ಹರಸಾಹಸವೂ ಇದರಲ್ಲಿದೆ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲೇ ಕೇಳಿಬಂದಿವೆ. ಈ ನಡುವೆ ಬಿಜೆಪಿ-ಜೆಡಿಎಸ್‌ಗೆ ಟಕ್ಕರ್ ಕೊಡುವ ಸಮಾವೇಶದಲ್ಲೇ ಕೆಲ ಸಚಿವರು ಸಿದ್ದರಾಮಯ್ಯ ಮೂರು ಮುಕ್ಕಾಲು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಮುದ್ರೆಯನ್ನು ಒತ್ತಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ನೆಲೆ ಗಟ್ಟಿಗೊಳಿಸುವ ಯತ್ನವೂ ಹೌದು ಎನ್ನಬಹುದು. ಒಳಸುಳಿಯ ಹೊಡೆತದ ನಡುವೆಯೂ ಮೂರೂ ಮುಕ್ಕಾಲು ವರ್ಷದ ಬೆಳೆಗೆ ಬೆವರು ಹರಿಸುತ್ತಿರುವ ವಿಜಯೇಂದ್ರಗೆ ಸದ್ಯಕ್ಕೆ ಲಾಭ ಎಂಬುದೆಷ್ಟು ಸತ್ಯವೋ.. ಅದೇ ರೀತಿ ತಂದೆಯ ರಾಷ್ಟ್ರ ರಾಜಕಾರಣದ ನಡೆಯಿಂದ ಜೆಡಿಎಸ್ ನೆಲೆಯಲ್ಲಿ ಉತ್ತರಾಧಿಕಾರತ್ವ ಯತ್ನಕ್ಕೆ ನಿಖಿಲ್‌ಗೂ ರಹದಾರಿ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ ಒಕ್ಕಲಿಗ ಕೋಟೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಡುವಿನ ಯುದ್ಧ ಮೇಲ್ನೋಟಕ್ಕೆ ಒಕ್ಕಲಿಗ ಪಾರುಪತ್ಯ ಅನ್ನಿಸಿದರೂ ಜೆಡಿಎಸ್ ಶಕ್ತಿಯನ್ನು ಅಳೆಯುವಂತಿದೆ. ಆ ಕಾರಣಕ್ಕಾಗಿಯೇ ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ, ಒಂದೊಂದು ಸಲ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್ ನಡುವೆ ರಾಜಕೀಯ ಸಮರ ನಡೆಯುತ್ತೆ. ಹಾಗಾಗಿ `ಕಪ್ಪು ಚುಕ್ಕೆ’ ಇಡುವ ಆಟದಲ್ಲಿ ಸಿದ್ದರಾಮಯ್ಯಗೆ ಅಪ್ಪಳಿಸಿದ ಅನಿರೀಕ್ಷಿತ ಅಲೆ ಕರ್ನಾಟಕ ರಾಜಕಾರಣದಲ್ಲಿ ಯಾರ ದಿಕ್ಕನ್ನ ಬದಲಿಸುತ್ತೋ..? ಕಾದು ನೋಡಬೇಕಿದೆ.