ನವದೆಹಲಿ: ಜೂ.3ರಂದು ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪತನವಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ 13 ಜನರ ಪೈಕಿ 7 ಜನರ ಮೃತದೇಹವನ್ನು ವಾಯು ಪಡೆ ಪತ್ತೆ ಹಚ್ಚಿದೆ.
ಕಾಣೆಯಾದ ವಿಮಾನದ ಅವಶೇಷಗಳನ್ನು ಜೂ.11ರಂದು ಎಂಐ-17 ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಲಾಗಿತ್ತು. ನಂತರ ಶವಗಳನ್ನು ಹಾಗೂ ಒಂದು ವೇಳೆ ಅದೃಷ್ಟವಶಾತ್ ಬದುಕುಳಿದವರನ್ನು ಹುಡುಕುವ ಬೃಹತ್ ಕಾರ್ಯಾಚರಣೆಯನ್ನು ಭಾರತೀಯ ವಾಯು ಸೇನೆ ಪ್ರಾರಂಭಿಸಿತ್ತು.
ಇದು ಸೋವಿಯತ್ ಅಭಿವೃದ್ಧಿಪಡಿಸಿದ, ಎರಡು ಎಂಜಿನ್‍ನ ಟರ್ಬೋಪ್ರಾಪ್ ಟ್ರಾನ್ಸ್‍ಪೋರ್ಟ್ ವಿಮಾನವಾಗಿದ್ದು, ಅಸ್ಸಾಂನ ಜೊಹ್ರಾತ್‍ನಿಂದ ಮೆಚುಕಾದ ಮಿಲಿಟರಿ ಲ್ಯಾಂಡಿಂಗ್ ಸ್ಟ್ರಿಪ್‍ಗೆ ಹಾರಾಟ ನಡೆಸುತ್ತಿದ್ದಾಗ ಜೂ.3ರಂದು ಮಧ್ಯಾಹ್ನ 1 ಗಂಟೆಗೆ ರಡಾರ್‍ನಿಂದ ಸಂಪರ್ಕ ಕಳೆದುಕೊಂಡಿತ್ತು.
ಪತನವಾದ ಎಎನ್-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ ಎರಡು ದಿನಗಳ ನಂತರ ಭಾರತೀಯ ವಾಯು ಸೇನೆ ವಿಮಾನದಲ್ಲಿದ್ದ ಯಾರೂ ಬದುಕುಳಿದರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಮೃತ ದೇಹ ಹಾಗೂ ಅವಶೇಷವನ್ನು ಜೋಹ್ರಾತ್‍ನ ವಾಯು ನೆಲೆಗೆ ತರಲಾಗುವುದು ಎಂದು ವಾಯು ಪಡೆ ತಿಳಿಸಿದೆ.
ಅಮೀದ್ ಪರ್ವತದ 12,000 ಅಡಿ ಎತ್ತರದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದು, ಪರ್ವತದ ಭಾಗದಲ್ಲಿ ಹವಾಮಾನ ವೈಪರಿತ್ಯ ಹಾಗೂ ಮೋಡಗಳಿದ್ದರಿಂದ ದಿಕ್ಕು ಸರಿಯಾಗಿ ಕಾಣದೆ ಎಎನ್-32 ವಿಮಾನವು ಪತನವಾಗಿತ್ತು. ವಿಮಾನದಲ್ಲಿದ್ದ ಪ್ರಮುಖ ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್), ವಿಮಾನದ ಡಾಟಾ ರೆಕಾರ್ಡರ್ ಹಾಗೂ ಬ್ಲ್ಯಾಕ್ ಬಾಕ್ಸ್‍ಗಳನ್ನು ಕಳೆದ ವಾರವೇ ವಾಯು ಪಡೆ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಬ್ಲ್ಯಾಕ್ ಬಾಕ್ಸ್‍ಗೆ ಹಾನಿಯಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ವಿಮಾನ ಪತನಕ್ಕೆ ನಿರ್ದಿಷ್ಟ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸಮಯಾವಕಾಶದ ಅಗತ್ಯವಿದೆ ಎಂದು ವಾಯು ಪಡೆಯ ಮೂಲಗಳು ತಿಳಿಸಿವೆ.
ಪತನವಾದ ವಿಮಾನದಲ್ಲಿದ್ದ 13 ಜನರ ಸಂಬಂಧಿಕರು ಒಂದು ವಾರದಿಂದ ಜೊಹ್ರಾತ್ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತ ಕುಳಿತಿದ್ದು, ವಾಯುಪಡೆಯ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರಿದ್ದರು. ವಾಯುಪಡೆಯ ಸಿಬ್ಬಂದಿ ತಂಡಗಳು ಹಾಗೂ ಸ್ಥಳೀಯ ಪರ್ವತಾರೋಹಿಗಳು ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ನಿರಂತರ ಮಳೆ ಹುಡುಕಾಟದ ಕಾರ್ಯಾಚರಣೆಗೆ ಸವಾಲು ಅಡ್ಡಿಯುಂಟು ಮಾಡುತ್ತಿದೆ.
ಪತನವಾದ ವಿಮಾನ ಜೋಹ್ರಾತ್‍ನಿಂದ ಹಾರಾಟ ಪ್ರಾರಂಭಿಸಿದಾಗ ಲೆಫ್ಟಿನೆಂಟ್ ಆಶಿಶ್ ತನ್ವಾರ್ ಅವರು ಏರ್ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತ್ನಿ ಸಂಧ್ಯಾ ತನ್ವಾರ್ ಸಹ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]