ನವದೆಹಲಿ: ಪಕ್ಷಿಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವುದು ಸಾಮಾನ್ಯ. ಆದರೆ ಸೈಬೀರಿಯಾದ (Siberia) ಗಿಡುಗವೊಂದು ಭಾರತದ ಮಣಿಪುರಕ್ಕೆ (Manipura) ಬಂದು ಅರಬ್ಬಿ ಸಮುದ್ರ ದಾಟಿ ಅಫ್ರಿಕಾ (Africa) ಖಂಡಕ್ಕೆ ಹೋಗಿ ಈಗ ಮರಳಿ ಅರಬ್ಬಿ ಸಮುದ್ರ ದಾಟಿ ಭಾರತದ (India) ಮೂಲಕ ಸೈಬೀರಿಯಾದತ್ತ ಹಾರುತ್ತಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮಣಿಪುರಕ್ಕೆ ಬಂದಿದ್ದ ಗಿಡುಗ ( Amur Falcon) ಆಫ್ರಿಕಾದ ದೇಶಗಳಲ್ಲಿ 114 ದಿನಗಳ ಕಾಲ ಉಳಿದು ಈಗ ಮರಳಿ ಸೈಬೀರಿಯಾದ ಕಡೆಗೆ ಹೋಗುತ್ತಿದೆ. ವಲಸೆಗಾಗಿಯೇ ವರ್ಷದಲ್ಲಿ ಒಟ್ಟು 22 ಸಾವಿರ ಕಿ.ಮೀ ಕ್ರಮಿಸುವ ಈ ಗಿಡುಗಗಳು ಈಶಾನ್ಯ ಭಾರತದಲ್ಲಿ ಸಿಗುವ ವಿಶೇಷ ಆಹಾರಕ್ಕೆ ಪ್ರಯಾಣದ ಮಧ್ಯೆ ಒಂದು ಬ್ರೇಕ್ ನೀಡುತ್ತವೆ.
ರೇಡಿಯೋ ಕಾಲರ್ ಅಳವಡಿಕೆ:
ಕಳೆದ ವರ್ಷ ಅಕ್ಟೋಬರ್ 12 ರಂದು, ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಗೆ ಸೈಬೀರಿಯಾದಿಂದ ಎರಡು ಅಮುರ್ ಫಾಲ್ಕನ್ (ಗಿಡುಗದ ಒಂದು ಪ್ರಭೇದ) ಆಗಮಿಸಿತ್ತು. ಈ ಗಿಡುಗಗಳಿಗೆ ಭಾರತೀಯ ವನ್ಯಜೀವಿ ಸಂಸ್ಥೆಯ (WII) ವಿಜ್ಞಾನಿಗಳು ರೇಡಿಯೋ ಟ್ಯಾಗ್ (Radio-tagged) ಅಳವಡಿಸಿದ್ದರು. ತಮೆಂಗ್ಲಾಂಗ್ ಜಿಲ್ಲೆಯ ಎರಡು ಹಳ್ಳಿಗಳ ಹೆಸರನ್ನು ಆಧರಿಸಿ ಗಂಡು ಹಕ್ಕಿಗೆ ‘ಚಿಯುಲುವಾನ್ 2’ , ಹೆಣ್ಣು ಹಕ್ಕಿಗೆ ‘ಗ್ವಾಂಗ್ರಾಮ್’ ಎಂದು ಹೆಸರನ್ನು ಇಡಲಾಗಿತ್ತು. ಇದನ್ನೂ ಓದಿ: ಅಂಗಳದಲ್ಲಿ ಅರಳುತ್ತಿರುವ ʻಬೆಟ್ಟದ ಹೂವಿಗೂʼ ಒಂದು ದಿನ!
ನವೆಂಬರ್ 2024 ರಲ್ಲಿ ಎರಡು ಗಿಡುಗಳಿಗೆ ಉಪಗ್ರಹ ಟ್ರಾನ್ಸ್‌ಮಿಟರ್‌ಗಳೊಂದಿಗೆ ಅಳವಡಿಸಲ್ಪಟ್ಟ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಿದ್ದರು. ಗಂಡು ಗಿಡುಗವು ಏಪ್ರಿಲ್ 8 ರಂದು ಬೋಟ್ಸ್ವಾನಾದಿಂದ ಮರಳುವ ವಲಸೆಯನ್ನು ಪ್ರಾರಂಭಿಸಿದೆ. ಏಪ್ರಿಲ್ ಮಧ್ಯದ ವೇಳೆಗೆ ಸುಮಾರು 3,000 ಕಿಲೋಮೀಟರ್‌ಗಳನ್ನು ಕ್ರಮಿಸಿ ಸೊಮಾಲಿಯಾವನ್ನು ತಲುಪಿತ್ತು. ಮುಂದಿನ ಹತ್ತು ದಿನಗಳಲ್ಲಿ ಅದು ಅರಬ್ಬಿ ಸಮುದ್ರವನ್ನು ದಾಟಿ ಭಾರತಕ್ಕೆ ಬರುವ ನಿರೀಕ್ಷೆಯಿದೆ.
ಹೆಣ್ಣು ಗಿಡುಗ ಈಗ ಸಂಕೇತ ಕಳುಹಿಸುವುದನ್ನು ನಿಲ್ಲಿಸಿದ್ದು ಕೊನೆಯದಾಗಿ ಫೆಬ್ರವರಿ 1 ರಂದು ಕೀನ್ಯಾದಲ್ಲಿ ಹಾರುತ್ತಿತ್ತು. ಸದ್ಯ ಅದರ ಪ್ರಸ್ತುತ ಸ್ಥಿತಿ ತಿಳಿದಿಲ್ಲವಾದರೂ ಹಿಂದಿನ ಟ್ರ್ಯಾಕಿಂಗ್ ಡೇಟಾವು ಹೆಣ್ಣು ಗಿಡುಗಗಳು ಹಾದು ಹೋಗುವ ಮಾರ್ಗಗಳ ಬಗ್ಗೆ ಮಾಹಿತಿಯನ್ನು ನೀಡಿದೆ.
ಅಮುರ್ ಗಿಡುಗಗಳು ಇರೋದು ಎಲ್ಲಿ?
ರಷ್ಯಾ ಮತ್ತು ಈಶಾನ್ಯ ಚೀನಾದ ದೂರದ ಪೂರ್ವ ಭಾಗಗಳಲ್ಲಿರುವ ಅಮುರ್ ಪ್ರದೇಶ ಈ ಗಿಡುಗಗಳ ಮೂಲ ಸ್ಥಾನ. ಬೇಸಿಗೆಯಲ್ಲಿ ಸಂತಾನೋತ್ಪತ್ತಿ ಮಾಡುವ ಈ ಗಿಡುಗಗಳು ಮರದ ಕುಳಿಗಳಲ್ಲಿ ಗೂಡುಕಟ್ಟುತ್ತವೆ ಮತ್ತು ಕೀಟಗಳನ್ನು ತಿನ್ನುತ್ತವೆ. ಸೆಪ್ಟೆಂಬರ್‌ನಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಅವು ತಮ್ಮ ದಕ್ಷಿಣದ ವಲಸೆಯನ್ನು ಪ್ರಾರಂಭಿಸುತ್ತವೆ. ಚೀನಾ, ಭಾರತದ ಮೂಲಕ ಸಾವಿರಾರು ಕಿಲೋಮೀಟರ್ ಕ್ರಮಿಸಿ ಅರಬ್ಬಿ ಸಮುದ್ರವನ್ನು ದಾಟಿ ಆಫ್ರಿಕಾಗೆ ತೆರಳುತ್ತವೆ. ಇದನ್ನೂ ಓದಿ: ಏನಿದು ಪ್ರೇತ ವಿವಾಹ? ಯುವತಿಯರಿಗೆ ಶವಗಳ ಜೊತೆ ಮದುವೆಯಂತೆ!
ಬೇಸಿಗೆ ಅವಧಿಯಲ್ಲಿ ಅವು ಬೋಟ್ಸ್ವಾನಾ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಗೆ ಆಗಮಿಸುತ್ತವೆ. ಅಲ್ಲಿ ಚಳಿಗಾಲವನ್ನು ಕಳೆದ ನಂತರ ಗಿಡುಗಗಳು ಏಪ್ರಿಲ್‌ನಲ್ಲಿ ಮರಳಿ ಸೈಬೀರಿಯಾ ಕಡೆಗೆ ಹೋಗುವ ವೇಳೆ ಮತ್ತೊಮ್ಮೆ ಭಾರತದ ಮೇಲೆ ಹಾರುತ್ತವೆ.
ಭಾರತದಲ್ಲಿ ನಿಲ್ಲೋದು ಯಾಕೆ?
ಸೈಬೀರಿಯಾದಿಂದ ಅಫ್ರಿಕಾಗೆ ಹೋಗುವ ವೇಳೆ ಈ ಗಿಡುಗಗಳು ಭಾರತದಲ್ಲಿ ನಿಲ್ಲಲು ಕಾರಣ ಇದೆ. ಗಿಡುಗಗಳ ವಲಸೆ ವೇಳೆ ಭಾರತದ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮಣಿಪುರ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಲ್ಲಿ ಗಿಡುಗಗಳು ವಿಶ್ರಾಂತಿ ಪಡೆಯಲು ಮತ್ತು ಆಹಾರವನ್ನು ಸೇವಿಸಲು ತಮ್ಮ ಪ್ರಯಾಣದ ಮಧ್ಯೆ ಒಂದು ಬ್ರೇಕ್ ನೀಡುತ್ತವೆ. ಮಾನ್ಸೂನ್ ಕಡಿಮೆಯಾಗುವ ಸಮಯದಲ್ಲಿ ಗೆದ್ದಲು ಹುಳಗಳನ್ನು ಈ ಗಿಡುಗಗಳು ತಿನ್ನುತ್ತವೆ. ಈ ಗೆದ್ದಲು ಹುಳಗಳೇ ಸಾಗರದ ಮೇಲೆ 3,000 ಕಿ.ಮೀ ಹಾರಾಟ ನಡೆಸಲು ಶಕ್ತಿಯನ್ನು ನೀಡುತ್ತವೆ.
ಕದ ವರ್ಷ ನವೆಂಬರ್ 8 ರಂದು ಮಣಿಪುರದಿಂದ ಹೊರಟಿದ್ದ ಈ ಪಕ್ಷಿಯು ಡಿಸೆಂಬರ್ 20 ರಂದು ದಕ್ಷಿಣ ಆಫ್ರಿಕಾವನ್ನು ತಲುಪಿ ನಂತರ ಬೋಟ್ಸ್ವಾನಾಕ್ಕೆ ತೆರಳಿತ್ತು. ಅಲ್ಲಿ ಅದು ಒಂದು ತಿಂಗಳಿಗೂ ಹೆಚ್ಚು ಕಾಲ ಇತ್ತು. ದಕ್ಷಿಣ ಆಫ್ರಿಕಾದಲ್ಲಿ 114 ದಿನಗಳನ್ನು ಕಳೆದು ಬೋಟ್ಸ್ವಾನಾದ ಸೆಂಟ್ರಲ್ ಕಲಹರಿ ರಿಸರ್ವ್‌ನಲ್ಲಿ 46 ದಿನಗಳನ್ನು ಕಳೆದು ಅಲ್ಲಿಂದ ಹಿಂದಿರುಗುವ ಪ್ರಯಾಣವನ್ನು ಈಗ ಆರಂಭಿಸಿದೆ.
ಚಳಿಗಾಲ ಸಮೀಪಿಸಿದಾಗ ಅಮುರ್ ಫಾಲ್ಕನ್‌ಗಳು ವಾರ್ಷಿಕವಾಗಿ ಸೈಬೀರಿಯಾ ಮತ್ತು ಉತ್ತರ ಚೀನಾದ ಶೀತ ಕಠಿಣ ಹವಾಮಾನವನ್ನು ಬಿಟ್ಟು ದಕ್ಷಿಣ ಆಫ್ರಿಕಾದ ಚಳಿಗಾಲದ ಪ್ರದೇಶಗಳಿಗೆ ತೆರಳಲು ಸುಮಾರು 14,500 ಕಿ.ಮೀ ದೂರ ಪ್ರಯಾಣಿಸುತ್ತವೆ ಮತ್ತು ನಂತರ ಏಪ್ರಿಲ್-ಮೇ ತಿಂಗಳಲ್ಲಿ ತಮ್ಮ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸುತ್ತವೆ.
ಅಮುರ್ ಫಾಲ್ಕನ್‌ಗಳ ವಲಸೆಯ ವೇಳೆ ಒಂದು ವರ್ಷದಲ್ಲಿ 22,000 ಕಿ.ಮೀ ದೂರವನ್ನು ಕ್ರಮಿಸುತ್ತವೆ. ಆಫ್ರಿಕಾದಿಂದ ಸೈಬೀರಿಯಾಗೆ ಮರಳುವಾಗ ಈ ಗಿಡುಗಗಳು ಮಣಿಪುರದ ತಮೆಂಗ್‌ಲಾಂಗ್‌ನಲ್ಲಿ ನಿಲ್ಲುವುದಿಲ್ಲ. ಮೇ ನಿಂದ ಅಕ್ಟೋಬರ್ ವರೆಗೆ ಅಮುರ್ ನದಿ ಪ್ರದೇಶದಲ್ಲಿ ಅವುಗಳ ಸಂತಾನೋತ್ಪತ್ತಿ ಅವಧಿಯ ನಂತರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳುತ್ತವೆ.
ಅಮುರ್ ಫಾಲ್ಕನ್‌ಗಳನ್ನು ಭಾರತದ ಮಾತ್ರವಲ್ಲ ಪ್ರಪಂಚದಾದ್ಯಂತ ಸಂರಕ್ಷಣಾ ರಾಯಭಾರಿಯಾಗಿ ಗುರುತಿಸಲಾಗುತ್ತದೆ.