– ದೂಷಿಸುವವರಲ್ಲಿ ಕೈಮುಗಿದು ಬೇಡ್ಕೊಂಡ ಸಮನ್ವಿ ತಾಯಿ
– ಮಗಳಿಗಾಗಿ ಪ್ರಾರ್ಥಿಸಿ ಅಂತ ಕೈಮುಗಿದ ನಟಿ
ಬೆಂಗಳೂರು: ಪ್ರತಿಯೊಬ್ಬರೂ ಈ ವಿಚಾರವಾಗಿ ಕಾಳಜಿಯ ಮಾತನ್ನಾಡಿದ್ದಾರೆ. ಆದರೆ ಜನರು ಎಲ್ಲೋ ಕೂತು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೀಗಾಗಬೇಕಾಗಿತ್ತು, ಹೀಗೆ ಮಾಡಬಹುದಿತ್ತು ಎನ್ನುವುದು ಸುಲಭ. ತಾಯಿಯಾಗಿ ನನಗೂ ಅನಿಸಿದೆ. ಆ ಸಂದರ್ಭದಲ್ಲಿ ಹೀಗೆ ಮಾಡಬೇಕಾಗಿತ್ತು ಎಂದು ನನಗೂ ಅನಿಸಿದೆ ಎಂದು ಮೃತ ಸಮನ್ವಿ ತಾಯಿ ಅಮೃತಾ ನಾಯ್ಡು ಕಂಬನಿ ಮಿಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಪಘಾತ ಸಂಭವಿಸಿದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟರು. ಅಂದು ಟಿಪ್ಪರ್ ಸಮನ್ವಿಗೆ ಡಿಕ್ಕಿ ಹೊಡೆದು ಆಕೆ ಮೂರ್ಛೆ ತಪ್ಪಿ ಬಿದ್ದಾಗಲೂ ಲಾರಿ ಡ್ರೈವರ್ ಮೇಲೆ ನನಗೆ ಎಳ್ಳಷ್ಟೂ ಕೋಪ ಬಂದಿರಲಿಲ್ಲ. ತಕ್ಷಣ ನನಗೆ ಮನಸ್ಸಿಗೆ ಬಂದಿದ್ದು, ಭಗವಂತನೇ ಇಂತಹ ಸಂದರ್ಭ ಕಲ್ಪಿಸಿ ಕೊಟ್ಟನೇನೋ ಎಂದು. ದೇವರು ಹೀಗೆ ಆಗಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದ. ಈ ಘಟನೆ ನಡೆದಿದ್ದು ನಿನ್ನಿಂದ, ನನ್ನಿಂದ ಎನ್ನೋದ್ರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
Advertisement
Advertisement
ನನ್ನ ನೋವನ್ನು ಅರ್ಥ ಮಾಡಿಕೊಂಡವರು ಈ ಕ್ಷಣ ನನ್ನ ಜೊತೆ ಇದ್ದಾರೆ. ನನ್ನನ್ನು ನೋವಿನಿಂದ ಹೊರಗಡೆ ತರಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ಎಲ್ಲೋ ಕೂತು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಯಾರನ್ನೂ ದೂಷಿಸಬೇಡಿ. ನಾನು ಗರ್ಭಿಣಿಯಾಗಿದ್ದರಿಂದ ಗಾಡಿ ತಗೊಂಡು ಹೋಗಬಾರದಿತ್ತು ಅಂತೆಲ್ಲ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳನ್ನಾಡಿ ನನ್ನ ಮೇಲೆ ಆರೋಪಗಳನ್ನು ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಬೇಡಿಕೊಂಡರು.
Advertisement
Advertisement
ಯಾವುದೇ ತಾಯಿ ತನ್ನ ಮಗುವನ್ನು ಬಲಿ ಕೊಡೋದಕ್ಕೆ ಹೋಗಲ್ಲ. ನೋವಲ್ಲಿರೋ ನಮನ್ನ ಈ ರೀತಿ ದೂಷಿಸಿ ಮತ್ತಷ್ಟು ನೋವು ಕೊಡಬೇಡಿ. ಹಲವರು ಇದಕ್ಕೆ ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಗಳಿಂದ ಸಮನ್ವಿ ಮರಳಿ ಬರಲು ಸಾಧ್ಯವಿಲ್ಲ. ನನ್ನ ಹತ್ತಿರದವರು ಜೊತೆಯಲ್ಲಿದ್ದು ಸಹಾಯ ಮಾಡುತ್ತಾ ಇದ್ದಾರೆ. ಸಾಧ್ಯವಾದರೆ ಅವಳಿಗೆ ಆಶೀರ್ವಾದ ಮಾಡಿ, ಅವಳಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
ಅಂದು ಏನಾಗಿತ್ತು?
ನನ್ನ ತಾಯಿ ಮನೆ ರಾಜಾಜಿನಗರದಲ್ಲಿದೆ. ಹೀಗಾಗಿ ಅಷ್ಟು ದೂರ ಬೈಕ್‌ನಲ್ಲಿ ಹೋಗುವುದು ನನಗೆ ಕಷ್ಟವಾಗಿದ್ದರಿಂದ ಮೆಟ್ರೋ ಹತ್ತಿ ಹೋಗುವುದಾಗಿ ನಿರ್ಧರಿಸಿದ್ದೆ. ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಕೇವಲ 2 ನಿಮಿಷಗಳ ದಾರಿ. ಸಮನ್ವಿಗೆ ಕಾರ್ ಪ್ರಯಾಣ ಇಷ್ಟ ಆಗಲ್ಲ ಎಂಬ ಕಾರಣಕ್ಕೆ ಮೆಟ್ರೋ ಸ್ಟೇಷನ್ ವರೆಗೆ ಬೈಕ್‌ನಲ್ಲಿ ಹೋಗಲು ನಿರ್ಧರಿಸಿದ್ವಿ ಎಂದರು.
ಆಕೆಯನ್ನ ಎಲ್ಲಿಗೇ ಕರೆದುಕೊಂಡು ಹೋಗುವಾಗಲೂ ಬಹಳ ಜಾಗ್ರತೆಯಿಂದಲೇ ಕರೆದುಕೊಂಡು ಹೋಗುತ್ತಿದ್ದೆವು. ಈ ರೀತಿ ಅನಾಹುತ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಸಮನ್ವಿಯನ್ನ ಮೊದಲು ಬೈಕ್‌ನ ಎದುರುಗಡೆಯೇ ಕೂರಿಸಿಕೊಳ್ಳುತ್ತಾ ಇದ್ದೆ. ಆದರೆ ಇತ್ತೀಚೆಗೆ ಆಕೆ ಸ್ವಲ್ಪ ಉದ್ದ ಬೆಳೆದಿದ್ದಾಳೆ. ಅಲ್ಲದೆ ಆಕೆಯ ತಲೆ ನನಗೆ ಅಡ್ಡ ಆಗ್ತಾ ಇದ್ದಿದ್ದರಿಂದ ಜೋಪಾನವಾಗಿನೇ ಹಿಂದುಗಡೆ ಕೂರಿಸಿಕೊಳ್ಳುತ್ತಾ ಇದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಅಂದು ನಾವಿಬ್ರೂ ತುಂಬಾ ಮಾತಾಡ್ತಾ ಇದ್ವಿ. ಮೆಟ್ರೋ ನಿಲ್ದಾಣ ನನಗೆ ಕಣ್ಣಿಗೆ ಕಾಣಿಸ್ತಾನೇ ಇತ್ತು. ಒಂದು ಕ್ಷಣ ನನಗೆ ಸಿಕ್ಕಿದ್ದಿದ್ರೆ ಎಡಕ್ಕೆ ತಿರುಗಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ದೊಡ್ಡ ಗಾಡಿಯೊಂದು ಬಂತು. ಆ ಕ್ಷಣಕ್ಕೆ ನನಗೆ ಅಷ್ಟು ಮಾತ್ರ ಗೊತ್ತಾಗಿದ್ದು. ಆಕೆ ರೋಡ್‌ಗೆ ಬಿದ್ದಿದ್ದಳು. ನಾನೂ ಕೂಡಾ ಬಿದ್ದಿದ್ದೆ. ಮಗು ಬಿದ್ದಿದೆ, ಆಕೆ ಭಯ ಪಟ್ಟಿರುತ್ತಾಳೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಕೆ ಮೂರ್ಛೆ ತಪ್ಪಿ ಹೋಗಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಗೊತ್ತಾಗಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳುತ್ತಾ ಬೇಸರಗೊಂಡರು.
ಆಕೆಯ ತೊಡೆ ಭಾಗಕ್ಕೆ ಸ್ವಲ್ಪ ಗಾಯ ಆಗಿತ್ತು. ಡಾಕ್ಟರ್ ಕೂಡಾ ಹೇಳಿದ್ದರು ಅದು ಅಷ್ಟೆನೂ ದೊಡ್ಡ ಗಾಯ ಅಲ್ಲ ಎಂದು. ಬಹುಶಃ ಆ ಘಟನೆಯ ಶಾಕ್‌ನಿಂದ ಆಕೆಗೆ ಹೀಗಾಗಿರಬಹುದು ಎಂದು ಅಮೃತಾ ಮಗಳ ಸಾವಿನ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು
ನಾವು ಮಗುವನ್ನು ಕಳೆದುಕೊಂಡಿದ್ದೇವಾ ಅಥವಾ ಯಾರೋ ಹಿರಿಯರನ್ನ ಕಳೆದುಕೊಂಡಿದ್ದೇವಾ ಎಂಬುದೇ ತಿಳೀತಾ ಇಲ್ಲ. ಆಕೆಗೆ ಏನು ಹೇಳಿದ್ರೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾ ಇದ್ದಳು. ಆಕೆಯನ್ನ ತುಂಬಾ ಜೋಪಾನ ಮಾಡಿ ಸಾಕಿದ್ವಿ. ಆಕೆಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಅಂತ ಒಳ್ಳೆ ಶಾಲೆಗೂ ಸೇರಿಸಿದ್ವಿ. ಅಪರೂಪದಲ್ಲಿ ಅವಳಿಗೆ ಸುಲಭವಾಗಿ ಸೀಟ್ ಕೂಡಾ ಸಿಕ್ಕಿತ್ತು. ಭಗವಂತ ಆಕೆಯ ಜೀವನದ ಎಲ್ಲಾ ಹಂತವನ್ನೂ ಸುಲಭವಾಗಿ ಪಾರು ಮಾಡಿಸಿದ್ದಾನೆ. ಆದರೆ ಸಾವನ್ನ ಮಾತ್ರ ಪಾರು ಮಾಡಿಸದೇ ಹೋದ ಅಮೃತಾ ಕಂಬನಿ ಮಿಡಿದರು. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಈ ನೋವು ಒಂದು ಕಡೆಯಾದರೆ ಮನಸ್ಸಿಗೆ ಸಮಾಧಾನವನ್ನು ತಂದುಕೊಟ್ಟಿರುವ ಕೆಲಸವನ್ನು ಮಾಧ್ಯಮದವರು ಮಾಡಿದ್ದಾರೆ. ಸಮನ್ವಿಯನ್ನು ಜನರಿಗೆ ತಲುಪಿಸುವ ಕೆಲಸದೊಂದಿಗೆ ಜನರು ಅವಳಿಗೋಸ್ಕರ ಪ್ರಾರ್ಥಿಸುವಂತೆ ಮಾಡಿದ್ದಾರೆ. ಇಷ್ಟು ಪ್ರೀತಿಯ ಜೊತೆ ಅವಳನ್ನು ಕಳುಹಿಸಿ ಕೊಡುವಂತೆ ಸಹಾಯ ಮಾಡಿರುವ ಮಾಧ್ಯಮಗಳಿಗೆ ಹಾಗೂ ಪಬ್ಲಿಕ್ ಟಿವಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.