ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಅಮೃತಾ ಅವರು ಭಾವನಾತ್ಮಕವಾಗಿ ಶುಭಾಶಯ ಕೋರಿದ್ದು, ಮಗನಿಂದಲೂ ವಿಶ್ ಮಾಡಿಸಿದ್ದಾರೆ.
ಅಮೃತಾ ಅವರು ಜನವರಿ 25 ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೃತ ಪ್ರಣಯ್ ಬರ್ತ್ ಡೇ ಫೆಬ್ರವರಿ 1 ರಂದು ಇತ್ತು. ಆದ್ದರಿಂದ ಅಮೃತಾ ಪ್ರೀತಿಯಿಂದ ಪತಿ ಪ್ರಣಯ್ ಗೆ ಫೇಸ್ ಬುಕ್ ನಲ್ಲಿ ಶುಭಾಶಯ ಕೋರಿದ್ದಾರೆ. ಬಳಿಕ ಅವರು ತನ್ನ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಕಿ ಮಗನಿಂದಲೂ ಶುಭಾಶಯ ತಿಳಿಸಿದ್ದಾರೆ.
ಮೊದಲಿಗೆ ಅಮೃತಾ, “ಗಂಟೆ, ದಿನ, ತಿಂಗಳು, ವರ್ಷ ಹಾಗೂ ದಶಕಗಳು ಉರುಳಬಹುದು. ಆದರೆ ನಾನು ನಿಮ್ಮ ಬರ್ತ್ ಡೇ ದಿನವನ್ನು ಎಂದಿಗೂ ಮರೆಯುವುದಿಲ್ಲ. ನೀವು ನಿಮ್ಮ ತೋಳುಗಳಿಂದ ನನ್ನನ್ನು ಹಿಡಿದು, ನನ್ನ ಕಣ್ಣುಗಳನ್ನು ನೋಡುತ್ತಾ ‘ಐ ಲವ್ ಯು’ ಎಂದು ನನ್ನ ಕಣ್ಣುಗಳಿಗೆ ಪಿಸುಗುಟ್ಟಿದ್ದೀರಿ. ಹ್ಯಾಪಿ ಬರ್ತ್ ಡೇ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ” ಎಂದು ಬರೆದು ಪ್ರಣಯ್ ಅಮೃತಾ ಕಣ್ಣುಗಳನ್ನು ನೋಡುತ್ತಿರುವ ಫೋಟೋ ಹಾಕಿ ಶುಭಾಶಯ ತಿಳಿಸಿದ್ದರು.
“ನಿಮ್ಮ ಆತ್ಮ ತುಂಬಾ ಪರಿಶುದ್ಧವಾಗಿದೆ. ನಿಮ್ಮ ಅತ್ಯಮೂಲ್ಯವಾದ ಬುದ್ಧಿವಂತಿಕೆ ಬೆರಗುಗೊಳಿಸುತ್ತದೆ. ಹ್ಯಾಪಿ ಬರ್ತ್ ಡೇ ಡ್ಯಾಡಿ.. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದು ಮಗನ ಜೊತೆಗಿರುವ ಫೋಟೋ ಹಾಕಿ ಮಗನಿಂದ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.
ಅಮೃತಾ ವಿಶ್ ಮಾಡಿದ ರೀತಿ ಮತ್ತು ಫೋಟೋ ಎಲ್ಲರ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೃತಾ ಅವರು ಈ ಪೋಸ್ಟ್ ಮಾಡಿದ ತಕ್ಷಣ ಅನೇಕ ಮಂದಿ ಲೈಕ್ಸ್ ಮಾಡಿದ್ದು, ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ ಫೋಟೋವನ್ನು 2.6 ಸಾವಿರ ಮಂದಿ ಶೇರ್ ಮಾಡಿದ್ದು, 21 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಪ್ರಣಯ್ ಮತ್ತು ಅಮೃತಾ ಜೀವನದ ಪಯಣದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟೆಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv