ಚಂಡಿಗಢ: ಕಳೆದ ನಾಲ್ಕು ದಿನಗಳಿಂದ ಪಂಜಾಬ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಖಲಿಸ್ತಾನಿ (Khalistan) ಬೆಂಬಲಿಗ ಅಮೃತ್ಪಾಲ್ ಸಿಂಗ್ (Amritpal Singh) ದೇಶದಿಂದಲೇ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈವರೆಗೂ ಅಮೃತ್ಪಾಲ್ ಸಿಂಗ್ ಸಿಕ್ಕಿಲ್ಲ ಎಂದೇ ಪಂಜಾಬ್ ಪೊಲೀಸರು (Punjab Police) ಹೇಳುತ್ತಿದ್ದಾರೆ. ಈ ನಡುವೆ ಅಮೃತ್ಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಬಳಸಿದ 2ನೇ ವಾಹನವನ್ನು ಮತ್ತು ಆತ ಬಳಸಿದ್ದ ಬಟ್ಟೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 80 ಸಾವಿರ ಪೊಲೀಸರು ಏನ್ ಮಾಡ್ತಿದ್ದಾರೆ – ಅಮೃತ್ಪಾಲ್ ಸಿಂಗ್ ಬಂಧಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ
ಅಮೃತ್ಪಾಲ್ ಸಿಂಗ್ ತನ್ನ ಸಹಚರರೊಡನೆ ಬೈಕಲ್ಲಿ ಪಂಜಾಬ್ ಗಡಿ ದಾಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಂದು ವೇಳೆ ಇದು ನಿಜವಾದಲ್ಲಿ ಆತ ನೇಪಾಳದ ಮೂಲಕ ಕೆನಡಾಗೆ ಎಸ್ಕೇಪ್ ಆಗುವ ಸಾಧ್ಯತೆಗಳು ಇವೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ಔಟ್- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್ ಚೋಕ್ಸಿ ಸಂಚರಿಸಬಹುದು
30 ವರ್ಷದ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ನಂತರ ಶನಿವಾರ ಬೆಳಿಗ್ಗೆ 11.27ರ ಸುಮಾರಿಗೆ ಜಲಂಧರ್ನ ಟೋಲ್ ಬೂತ್ ದಾಟಿ ಹೋಗುವುದು ಪತ್ತೆಯಾಗಿದೆ. ಆತ ಮಾರುತಿ ಬ್ರೆಜಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅದಕ್ಕೂ ಮುನ್ನ ಆತ ಮರ್ಸಿಡಿಸ್ ಎಸ್ಯುವಿಯಲ್ಲಿ (Mercedes SUV) ಇರುವುದು ಕಂಡುಬಂದಿತ್ತು. ಆ ಕಾರನ್ನು ಆತ ಶಾಹಕೋಟ್ನಲ್ಲಿ ಬಿಟ್ಟು ತೆರಳಿದ್ದ. ಅಲ್ಲಿಂದ ಕೆಲವು ಗಂಟೆಗಳ ನಂತರ ತನ್ನ ಸಹವರ್ತಿಯೊಬ್ಬನ ಮಾರುತಿ ಬ್ರೆಜಾ ಕಾರಿನಲ್ಲಿ ಪ್ರಯಾಣಿಸಿದ್ದ. ಕಾರಿನಲ್ಲಿ ಆತ ಬಟ್ಟೆಗಳನ್ನು ಬದಲಿಸಿರುವುದು ಖಚಿತವಾಗಿದೆ. ಆತ ಮಾಮೂಲಿಯಾಗಿ ಧರಿಸುವ ಉಡುಪಿನ ಬದಲು ಅಂಗಿ ತೊಟ್ಟಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಮಧ್ಯೆ, ಪಂಜಾಬ್ ಪೊಲೀಸರ ಕಾರ್ಯವೈಖರಿ ಬಗ್ಗೆ ಪಂಜಾಬ್ ಹೈಕೋರ್ಟ್ (Punjab Highcourt) ಹಲವು ಗಂಭೀರ ಪ್ರಶ್ನೆಗಳನ್ನ ಕೇಳಿದೆ. ಅಮೃತ್ಪಾಲ್ ಸಿಂಗ್ ಹೊರತುಪಡಿಸಿ ಉಳಿದವರನ್ನು ಹೇಗೆ ಬಂದಿಸಿದ್ರಿ? ಪೊಲೀಸ್ರು ಚೇಸ್ ಮಾಡಿದರೂ, ಅಮೃತ್ಪಾಲ್ ಸಿಂಗ್ ಮಾತ್ರ ತಪ್ಪಿಸಿಕೊಂಡಿದ್ದು ಹೇಗೆ? 80 ಸಾವಿರ ಪೊಲೀಸರು ಏನು ಮಾಡ್ತಿದ್ರು ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದು, ಮುಂದಿನ ವಿಚಾರಣೆ 4 ದಿನಗಳ ಬಳಿಕ ನಡೆಯಲಿದೆ.
ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಬಂಧನಕ್ಕಾಗಿ ಕಳೆದ 4 ದಿನಗಳಿಂದ ಬಹುದೊಡ್ಡ ಕಾರ್ಯಾಚರಣೆಯನ್ನು ಪಂಜಾಬ್ ಪೊಲೀಸರು ಆರಂಭಿಸಿದ್ದಾರೆ. ಸತತ ಹುಡುಕಾಟದ ಬಳಿಕ ಅಮೃತ್ ಪಾಲ್ ಸಿಂಗ್ ಬಂಧಿಸುವಲ್ಲಿ ವಿಫಲವಾದ ಇಲಾಖೆ ಆತನ ಆಪ್ತರನ್ನು ಬಂಧಿಸಿದೆ. ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆ ರಾಜ್ಯದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರ ಮುಂದೆ ಶರಣಾದ ಅಮೃತ್ಪಾಲ್ ಸಿಂಗ್ ಮಾವನನ್ನು ಅಸ್ಸಾಂನ ದಿಬ್ರುಘಡ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪಂಜಾಬ್ನಲ್ಲಿ ಇಂಟರ್ನೆಟ್ ಸೇವೆಗಳು ಭಾಗಶಃ ಆರಂಭವಾಗಿವೆ. ಕೆಲವೆಡೆ ಗುರುವಾರ ಮಧ್ಯಾಹ್ನದವರೆಗೂ ಸೇವೆ ಬಂದ್ ಮಾಡಲಾಗಿದೆ.