Friday, 20th July 2018

Recent News

ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್

ಬೆಂಗಳೂರು: 2017ರಲ್ಲಿ ರಾಜ್ಯ ನಾಯಕರಿಗೆ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಹೇಗೆ ಎಂದು ಪಾಠ ಮಾಡಿ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗ ಕೊನೆ ಕ್ಷಣದಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ ಎನ್ನುವುನ್ನು ಪಾಠ ಮಾಡಲಿದ್ದಾರೆ.

ಹೌದು, ನಗರಕ್ಕೆ ನಾಳೆ ಭೇಟಿ ನೀಡಲಿರುವ ಅಮಿತ್ ಶಾ ಅವರು ಚುನಾವಣೆಯಲ್ಲಿ ಜನರ ಮನಸ್ಸನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ? ಯಾವ ವಯಸ್ಸಿನವರನ್ನು ಹೇಗೆ ಸೆಳೆಯಬಹುದು? ಮಕ್ಕಳನ್ನು ಇಷ್ಟಪಡಿಸುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಿದರೆ ಯಾರನ್ನು ಒಲಿಸಿಕೊಳ್ಳಬಹುದು ಇತ್ಯಾದಿ ವಿಚಾರಗಳ ಬಗ್ಗೆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ಪಾಠ ಮಾಡಲಿದ್ದಾರೆ.

ಗುಜರಾತ್, ಉತ್ತರ ಪ್ರದೇಶದಲ್ಲಿ ಈ ತಂತ್ರಗಳನ್ನು ಅನುಸರಿಸಿ ಬಿಜೆಪಿ ಗೆದ್ದಿದೆ. ಅದೇ ತಂತ್ರವನ್ನು ರಾಜ್ಯದಲ್ಲೂ ಅನುಸರಿಲು ಶಾ ಮುಂದಾಗಿದ್ದಾರೆ. ಅಮಿತ್ ಶಾ ನಾಯಕರಿಗೆ ಮಾಡಲಿರುವ “ಚುನಾವಣಾ ಸ್ಪೆಷಲ್ ಕ್ಲಾಸ್” ನಲ್ಲಿರುವ ಪಠ್ಯದಲ್ಲಿರುವ ಅಂಶಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

ಸ್ಪೆಷಲ್ ಕ್ಲಾಸ್ ನಲ್ಲಿ ಏನಿದೆ?
ಪ್ರತಿನಿತ್ಯ ಮಧ್ಯಾಹ್ನ ಕಾರ್ಯಕರ್ತರ ಜೊತೆಗೆ ರಸ್ತೆ ಬದಿಯಲ್ಲಿಯೇ ನಿಂತು ಊಟ ಮಾಡಬೇಕು. ನಾಯಕ ಎನ್ನುವ ಹಮ್ಮು ಬಿಟ್ಟು ಅಲ್ಲೇ ಊಟ ಮಾಡಿದರೆ ನೀವು ಜನ ಸಾಮಾನ್ಯರಂತೆ ಗುರುತಿಸಿಕೊಳ್ಳುತ್ತಿರಿ. ಇದರಿಂದಾಗಿ ಕಾರ್ಯಕರ್ತರಿಗೆ ಪ್ರಚಾರ ಮಾಡಲು ಉತ್ಸಾಹ ಬರುತ್ತದೆ. ಸಾಧಾರಣವಾಗಿ ಮಧ್ಯಾಹ್ನದ ಬಳಿಕ ಕಾಲೇಜು ಕ್ಯಾಂಪಸ್, ಗ್ರಂಥಾಲಯದ ಬಳಿ ಹೋಗಿ ಪ್ರಚಾರ ಮಾಡಬೇಕು.

ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಟೀ, ಕಾಫಿ ಕುಡಿಯಲು ಟೀ ಶಾಪ್ ಗೆ ಬರುತ್ತಾರೆ. ಹೀಗಾಗಿ ಪಕ್ಷವನ್ನು ಪ್ರಚಾರ ಮಾಡಲು ಸಂಜೆ 4 ಗಂಟೆಗೆ ಟೀ ಶಾಪ್ ಗೆ ಭೇಟಿ ನೀಡಿ. ಈ ವೇಳೆ ಜನರ ಜೊತೆ ಟೀ ಕುಡಿಯುತ್ತಾ ಬೆರೆತು ಪಕ್ಷವನ್ನು ಪ್ರಚಾರ ಮಾಡಿ. ಕತ್ತಲಾಗುತ್ತಿದ್ದಂತೆ ಚಾಟ್ ಸೆಂಟರ್ ಗಳ ಬಳಿ ಹೆಚ್ಚು ಜನರು ಸೇರಿರುತ್ತಾರೆ. ಹೀಗಾಗಿ 6 ಗಂಟೆಗೆ ಚಾಟ್ ಸೇವಿಸುತ್ತಾ ನಾಯಕರ ಬಗ್ಗೆ ತಿಳಿ ಹೇಳಬೇಕು.

ತರಕಾರಿ ಹಾಗೂ ಹಣ್ಣಿನ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ರಾತ್ರಿ 7 ಗಂಟೆಯಿಂದ 8 ರವರೆಗೆ ಬರುತ್ತಿರುತ್ತಾರೆ. ಅವರ ಜೊತೆ ಮಾತನಾಡಿ ಪಕ್ಷದ ಕಡೆಗೆ ಗಮನ ಸೆಳೆಯಲು ಪ್ರಯತ್ನಿಸಿ. ಹಳ್ಳಿಗಳಲ್ಲಿ ಹಿರಿಯ ವ್ಯಕ್ತಿಗಳು ಸಂಜೆ ವೇಳೆ ಕಟ್ಟೆಯ ಮೇಲೆ ಕುಳಿತು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅವರ ಚರ್ಚೆಯಲ್ಲಿ ಭಾಗಿಯಾಗಿ 15 ನಿಮಿಷ ಕಮಲದ ನಾಯಕರ ಬಗ್ಗೆ ತಿಳಿಸಬೇಕು.

ಮಧ್ಯಾಹ್ನದ ಟೈಂ ಟೇಬಲ್ ಈ ಮೇಲಿನಂತಿದ್ದರೆ, ಬೆಳಗ್ಗೆಯೂ ಪ್ರಚಾರಕ್ಕೆ ಸಮಯ ನಿಗದಿಯಾಗಿದೆ. ಬೆಳಿಗ್ಗೆ 5.30 ರಿಂದ 7.30 ಗಂಟೆವರೆಗೆ ಉದ್ಯಾನವನಗಳಲ್ಲಿ, 7.30ರಿಂದ 8 ಗಂಟೆಯವರೆಗೆ ಕಾಫಿ ಸ್ಟಾಲ್‍ಗಳಲ್ಲಿ ಪ್ರಚಾರ ಮಾಡಬೇಕು. 8 ರಿಂದ 9 ಗಂಟೆವರೆಗೆ ಹೋಟೆಲ್, 9 ಗಂಟೆಗೆ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಪ್ರಚಾರ ಮಾಡಬೇಕು. ಇಷ್ಟು ಮಾಡಿದ ಮೇಲೆ 10 ಗಂಟೆಯ ಬಳಿಕ ಮನೆ ಮನೆ ಪ್ರಚಾರ ಆರಂಭಿಸಬೇಕು.

ಮನೆ ಮನೆ ಪ್ರಚಾರ ಮಾಡುವ ವೇಳೆ ಕೈಯಲ್ಲಿ ಬರೀ ಕರಪತ್ರವನ್ನು ಹಿಡಿದು ಪ್ರಚಾರ ಮಾಡುವುದಲ್ಲ. ಕೈಯಲ್ಲಿ ಚಾಕಲೇಟ್ ಹಿಡಿದುಕೊಳ್ಳಿ. ಮಕ್ಕಳಿಗೆ ಚಾಕಲೇಟ್ ಕೊಟ್ಟರೆ ಅವರ ಪೋಷಕರಿಗೆ ಖುಷಿಯಾಗಿ ನೀವು ಅವರ ನೆನಪಿನಲ್ಲಿ ಇರಲು ಸಾಧ್ಯವಾಗುತ್ತದೆ. ಪ್ರಚಾರಕ್ಕೆ ಕೇವಲ ಬೆಳಗ್ಗೆ ಮತ್ತು ರಾತ್ರಿ ಹೋಗಬೇಕು ಎನ್ನುವ ಹಳೆ ಸಮಯ ಪರಿಪಾಲನೆಯನ್ನು ಬಿಟ್ಟು ಎಲ್ಲ ಸಮಯದಲ್ಲೂ ಪಕ್ಷಕ್ಕಾಗಿ ದುಡಿಯಿರಿ. ಚುನಾವಣೆಗೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿರುವುದು ಸಾಧ್ಯವಾದಷ್ಟು ಜನರ ಮಧ್ಯದಲ್ಲಿ ನೀವು ಇರಬೇಕು.

Leave a Reply

Your email address will not be published. Required fields are marked *