ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

Public TV
1 Min Read
Amitabh bachchan

ಮುಂಬೈ: ಯಾರನ್ನು ಅವಮಾನಿಸುವ ಉದ್ದೇಶ ನಮಗಿರಲಿಲ್ಲ. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಕ್ಷಮೆ ಕೇಳುವ ಮೂಲಕ ಎಲ್ಲ ವಿವಾದಗಳಿಗೆ ಅಮಿತಾಬ್ ಬಚ್ಚನ್ ಇತಿಶ್ರೀ ಹಾಕಿದ್ದಾರೆ.

ಅಮಿತಾಬ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಇಲ್ಲಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಲಾಗುತ್ತದೆ. ಹಾಗೆಯೇ ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿತ್ತು.

ಪ್ರಶ್ನೆ: ಈ ಕೆಳಗಿನವರಲ್ಲಿ ಯಾರು ಮೊಗಲ್ ಸಾಮ್ರಾಟ್ ಔರಂಗಜೇಬ್ ಸಮಕಾಲೀನ ರಾಜ?
ಎ. ಮಹಾರಾಣಾ ಪ್ರತಾಪ್ ಬಿ. ರಾಣಾ ಸಾಂಗಾ ಸಿ. ಮಹಾರಾಜ ರಣ್‍ಜಿತ್ ಸಿಂಹ ಡಿ. ಶಿವಾಜಿ

ಈ ಪ್ರಶ್ನೆಯ ಉತ್ತರ ನಾಲ್ಕನೇ ಆಯ್ಕೆಯಾಗಿತ್ತು. ಆದರೆ ಪ್ರಶ್ನೆಯಲ್ಲಿ ಎಲ್ಲ ರಾಜರ ಹೆಸರನ್ನು ಪೂರ್ಣವಾಗಿ ಬಳಸಿ, ಛತ್ರಪತಿ ಶಿವಾಜಿ ಮಹಾರಾಜ ಅವರ ಹೆಸರನ್ನು ಏಕವಚನದಲ್ಲಿ ಬಳಸಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಶಿವಾಜಿ ಮಹಾರಾಜ ಮರಾಠರಿಗೆ ಮಾದರಿ ನಾಯಕ. ಎಲ್ಲರಿಗೂ ಅವರ ಬಿರುದಾಂಕಿತಗಳಿಂದ ಸಂಭೋದಿಸಿ ಶಿವಾಜಿ ಅವರಿಗೆ ಅವಮಾನಿಸಲಾಗಿದೆ. ಹಾಗಾಗಿ ವಾಹಿನಿ ಮತ್ತು ಅಮಿತಾಬ್ ಬಚ್ಚನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ನೆಟ್ಟಿಗರು ಟ್ವೀಟ್ ಮಾಡಲಾರಂಭಿಸಿದ್ದರು.

Amitabh bachchan 1

ಎಚ್ಚೆತ್ತಕೊಂಡ ಖಾಸಗಿ ವಾಹಿನಿ ತನ್ನ ವಕ್ತಾರರ ಮೂಲಕ ಕ್ಷಮೆಯನ್ನು ಕೇಳಿದೆ. ಕಾರ್ಯಕ್ರಮದ ಆಯೋಜಕರಾದ ಸಿದ್ಧಾರ್ಥ ಬಸು ಸಹ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಗೌರವ ಸ್ಮರಣಾರ್ಥವಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತೇ ವಿನಃ ಅಗೌರವ ತೋರಿಸುವ ಉದ್ದೇಶದಿಂದ ಅಲ್ಲ. ಈ ಸೀಸನ್ ನಲ್ಲಿ ಹಲವು ರಾಜರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಎಲ್ಲರ ಹೆಸರನ್ನು ಗೌರವಪೂರ್ವಕವಾಗಿಯೇ ಬಳಸಲಾಗಿದೆ. ಅಜಾಗರೂಕತೆ ಮತ್ತು ಸಿಬ್ಬಂದಿಯ ಲೋಪದಿಂದಾಗಿ ಈ ತಪ್ಪಾಗಿದ್ದು ಎಲ್ಲರಲ್ಲಿ ಕ್ಷಮೆ ಕೇಳುತ್ತೇವೆ ಎಂದು ಸಿದ್ಧಾರ್ಥ್ ಬಸು ಸ್ಪಷ್ಟಪಡಿಸಿದ್ದಾರೆ.

ಸಿದ್ಧಾರ್ಥ್ ಬಸು ಮಗದೊಂದು ಟ್ವೀಟ್ ನಲ್ಲಿ ಪ್ರಶ್ನೆಯನ್ನು ಸರಿ ಮಾಡಲಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಕ್ಷಮೆ ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *