Bengaluru CityDistrictsKarnatakaLatestLeading NewsMain Post

ಗುಜರಾತ್‌, ಉತ್ತರಾಖಂಡ್‌, ಉತ್ತರ ಪ್ರದೇಶ: ಕರ್ನಾಟಕದಲ್ಲಿ ಯಾವ ಮಾಡೆಲ್‌?

ಬೆಂಗಳೂರು: ಒಂದೊಂದು ರಾಜ್ಯದಲ್ಲಿ ಒಂದೊಂದು ಮಾದರಿಯನ್ನು ಜಾರಿ ಮಾಡುತ್ತಿರುವ ಬಿಜೆಪಿ ಹೈಕಮಾಂಡ್‌ ಚುನಾವಣೆ ಹತ್ತಿರ ಬರುತ್ತಿರುವ ಕರ್ನಾಟಕದಲ್ಲಿ ಯಾವ ಮಾದರಿಗೆ ಮಣೆ ಹಾಕುತ್ತದೆ? ಅಥವಾ ಕರ್ನಾಟಕದ್ದೇ ಮಾಡೆಲ್‌ ತರುತ್ತಾ ಎಂಬ ಕುತೂಹಲ ಎದ್ದಿದೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿದರೆ ಯಡಿಯೂರಪ್ಪ, ಅಶೋಕ್‌ ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ನಾಯಕರು ಏನೇ ಹೇಳಿದರೂ ಬಿಜೆಪಿ ಹೈಕಮಾಂಡ್‌ ಭಿನ್ನವಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಹೆಸರುವಾಸಿ. ಅನುಭವವೇ ಇಲ್ಲದ ವ್ಯಕ್ತಿಗೆ ಲೋಕಸಭೆ ಟಿಕೆಟ್‌. ಒಂದು ಬಾರಿ ಆಯ್ಕೆಯಾದ ವ್ಯಕ್ತಿಗೆ ಸಿಎಂ ಪಟ್ಟ. ಹಿರಿಯರ ಬದಲು ಸಂಪುಟದಲ್ಲಿ ಯುವ ಮುಖಗಳಿಗೆ ಆದ್ಯತೆ. ಈ ಎಲ್ಲ ಪ್ರಯೋಗ ಮಾಡಿ ಯಶಸ್ವಿಯಾಗಿರುವ ಬಿಜೆಪಿ ಕರ್ನಾಟಕದಲ್ಲಿ ಏನು ಮಾಡುತ್ತದೆ ಎನ್ನುವುದು ಸದ್ಯದ ಕುತೂಹಲ.

ಈ ಹಿಂದೆ ಗುಜರಾತ್‌, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮೇಜರ್‌ ಸರ್ಜರಿ ಮಾಡಿತ್ತು. ಈ ಸರ್ಜರಿ ಯಶಸ್ವಿಯಾಗಿತ್ತು. ಈಗ ಇಲ್ಲೂ ಈ ರೀತಿ ಸರ್ಜರಿ ನಡೆಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಗುಜರಾತ್ ಮಾಡೆಲ್:
ಗುಜರಾತ್‍ನಲ್ಲಿ ಸಿಎಂ ಆಗಿದ್ದ ವಿಜಯ ರೂಪಾನಿ ದಿಢೀರ್ ಬದಲಾವಣೆ ಮಾಡಿ ಮೊದಲ ಬಾರಿ ಶಾಸಕರಾಗಿದ್ದ ಭೂಪೇಂದ್ರ ಪಟೇಲ್‍ಗೆ ಸಿಎಂ ಪಟ್ಟ ನೀಡಲಾಗಿದೆ. ಸಂಪುಟದಲ್ಲಿ ದೊಡ್ಡ ಮಟ್ಟದಲ್ಲೇ ಬದಲಾವಣೆ ಮೂಲಕ ಹೊಸತನ ತರಲಾಗಿದೆ.

ಉತ್ತರಾಖಂಡ್ ಮಾಡೆಲ್:
ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳನ್ನು ಉತ್ತರಾಖಂಡ್‌ ಕಂಡಿತ್ತು. ಇಬ್ಬರು ಸಿಎಂಗಳನ್ನು ಮುಲಾಜಿಲ್ಲದೇ ಗೇಟ್‍ಪಾಸ್ ನೀಡಲಾಗಿತ್ತು. ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲಾಗಿತ್ತು. ಆದರೆ ಪುಷ್ಕರ್‌ ಸಿಂಗ್‌ ಧಾಮಿ ಸೋತಿದ್ದರೂ ಮತ್ತೆ ಅವರಿಗೆ ಪಟ್ಟವನ್ನು ಕಟ್ಟಲಾಗಿದೆ. ಇದನ್ನೂ ಓದಿ: ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

ಉತ್ತರಪ್ರದೇಶ ಮಾಡೆಲ್:
ಚುನಾವಣೆಯ ಸಂದರ್ಭದಲ್ಲಿ ಘಟಾನುಘಟಿ ನಾಯಕರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಯೋಗಿ ಆದಿತ್ಯನಾಥ್ ಸಂಪುಟದಲ್ಲಿದ್ದ ಕೆಲವು ಹಿಂದುಳಿದ ಹಿರಿಯ ನಾಯಕರಿಗೆ ಕೊಕ್ ನೀಡಲಾಗಿತ್ತು. ಭಿನ್ನಮತ ಸ್ಫೋಟಗೊಂಡರೂ ಕೆಲ ಹೊಸ ಮುಖಗಳಿಗೆ ಮಣೆ ಹಾಕಿ ಚುನಾವಣೆ ಎದುರಿಸಿತ್ತು. ಚುನಾವಣೆಯ ಹತ್ತಿರದಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗಿತ್ತು. ಬಿಜೆಪಿಯ ಈ ಪ್ರಯೋಗ ಯಶಸ್ವಿಯಾಗಿದ್ದು ಉತ್ತರಪ್ರದೇಶದಲ್ಲಿ ಎರಡನೇ ಬಾರಿ ಯೋಗಿ ಅಧಿಕಾರಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದನ್ನೂ ಓದಿ: ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

ಮೂರು ರಾಜ್ಯಗಳಲ್ಲೂ ಬಿಜೆಪಿಯ ಸಂಘಟನೆ ಗಟ್ಟಿ ಇದೆ. ಹೀಗಾಗಿ ನಾಯಕರನ್ನು ಬದಲಾವಣೆ ಮಾಡಿದರೂ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿಲ್ಲ. ಕರ್ನಾಟಕದಲ್ಲೂ ಬಿಜೆಪಿ ಸಂಘಟನೆ ಉತ್ತಮವಾಗಿದೆ. ಲೋಕಸಭಾ ಚುನಾವಣೆಯಲ್ಲಿ 25+1 ಸ್ಥಾನವನ್ನು ಗೆದ್ದುಕೊಂಡಿದೆ. ಈ ಧೈರ್ಯದಲ್ಲಿ ಬಿಜೆಪಿ ಹೈಕಮಾಂಡ್‌ ಈಗ ಚುನಾವಣೆಗೆ ಹತ್ತಿರ ಇರುವಾಗ ದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

Leave a Reply

Your email address will not be published.

Back to top button