Bengaluru CityKarnatakaLatestLeading NewsMain Post

ಅಮಿತ್ ಶಾಗೆ ರಾಜಾಹುಲಿ ನೀಡಿದ ಫಸ್ಟ್ ರಿಪೋರ್ಟ್ ರಿವೀಲ್ – ಸಿದ್ದರಾಮೋತ್ಸವ ಎಫೆಕ್ಟ್!

Advertisements

ಬೆಂಗಳೂರು: ಸಿದ್ದರಾಮೋತ್ಸವದಿಂದ ಕಾಂಗ್ರೆಸ್‍ಗೆ ಈಗ ಅಮೃತ ಘಳಿಗೆ ಶುರುವಾದಂತೆ ಕಾಣುತ್ತಿದೆ. ಬಿಜೆಪಿ ಒಳಗೊಳಗೆ ದಿಗಿಲು ಶುರುವಾಗಿದ್ದು, ಅಮಿತ್ ಶಾಗೆ ಫಸ್ಟ್ ರಿಪೋರ್ಟ್ ತಲುಪಿದೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಬಗ್ಗೆ ವರದಿ ಪಡೆದ ಅಮಿತ್ ಶಾ ಸಿಎಂ ಎದುರೇ ವಾರ್ನ್ ಮಾಡಿರುವುದು ವಿಶೇಷ.

ಅಂದಹಾಗೆ ನಿನ್ನೆ ದಾವಣಗೆರೆಯಲ್ಲಿ ಎತ್ತ ನೋಡಿದ್ರೂ ಜನ. ಕಣ್ಣು ಹಾಯಿಸಿದ್ದಷ್ಟು ಕಂಡ ತಲೆಗಳು. ಸಿದ್ದರಾಮೋತ್ಸವಕ್ಕೆ ನಿರೀಕ್ಷೆಗೂ ಮೀರಿದ ಜನಸಾಗರ ಸಿದ್ದರಾಮಯ್ಯಗಷ್ಟೇ ಅಚ್ಚರಿ ಅಲ್ಲ. ರಾಜ್ಯ ಬಿಜೆಪಿ ನಾಯಕರಿಗೂ ಶಾಕ್ ಕೊಟ್ಟಿದೆ. ಕಾಂಗ್ರೆಸ್‍ನವರಿಗೆ ಸಿದ್ರಾಮಣ್ಣ ಮಾಸ್ ಆದ್ರೆ ಬಿಜೆಪಿಯಲ್ಲಿ ನಮಗ್ಯಾರು ಬಾಸ್? ಎಂಬ ಪ್ರಶ್ನೆಗಳು ಶುರುವಾಗಿವೆ. ಈ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದಿಢೀರ್ ಭೇಟಿ ಮಾಡಿದ್ರು. ಬೆಂಗಳೂರು ಪ್ರವಾಸದಲ್ಲಿದ್ದ ಅಮಿತ್ ಶಾ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ರು. ಸೀದಾ ಕಾವೇರಿ ನಿವಾಸದಿಂದ ಹೊರಟ ಯಡಿಯೂರಪ್ಪ ಇಂದು ಬೆಳಗ್ಗೆ 8.30ಕ್ಕೆ ಅಮಿತ್ ಶಾ ಭೇಟಿ ಮಾಡಿ 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರ ಬಗ್ಗೆ ಅಮಿತ್ ಶಾಗೆ ಪ್ರಾಥಮಿಕ ವರದಿ ನೀಡಿದ್ರು ಎನ್ನಲಾಗಿದೆ. ಇದೇ ವೇಳೆ ಸಂಘಟನಾತ್ಮಕವಾಗಿ ಹಲವು ವಿಚಾರ ಚರ್ಚೆ ನಡೆಸಿದ್ರಂತೆ. ಬಳಿಕ ಎಲ್ಲವನ್ನೂ ಕೇಳಿಸಿಕೊಂಡು ಹೆಚ್ಚು ಮಾತನಾಡದ ಅಮಿತ್ ಶಾ, ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ದೆಹಲಿ ಮಟ್ಟದಲ್ಲೂ ಚರ್ಚೆ ಆಗಲಿದೆ ಎಂದಷ್ಟೇ ಹೇಳಿದ್ರು ಎಂಬುದು ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಎಷ್ಟೇ ಸಿದ್ದರಾಮೋತ್ಸವ ಮಾಡಿದ್ರೂ 2023ರಲ್ಲಿ ಅಧಿಕಾರಕ್ಕೆ ಬರೋದೇ ಬಿಜೆಪಿ – ಆರಗ ಜ್ಞಾನೇಂದ್ರ ಭವಿಷ್ಯ

ರಾಜಾಹುಲಿ ರಿಪೋರ್ಟ್:
ಸಿದ್ದರಾಮೋತ್ಸವ ಮಾಸ್ ಸಮಾವೇಶ ಚುನಾವಣಾ ಪ್ರಚಾರದ ದಿಕ್ಕನ್ನು ತೋರಿಸಿದೆ. ಹೀಗೆ ಸಿದ್ದು, ಡಿಕೆಶಿ ಹೊಂದಾಣಿಕೆ ಕ್ಯಾಂಪೇನ್ ಆದ್ರೆ ಬಿಜೆಪಿ ಎದುರಿಸಲು ಕಷ್ಟ ಆಗುತ್ತೆ. ಕಾಂಗ್ರೆಸ್ ಕೂಡ ಆ ಜನರನ್ನ ನಿರೀಕ್ಷೆ ಮಾಡಿರಲಿಲ್ಲ. ನಮಗೆ ಪರಿಣಾಮಕಾರಿ ರಾಜಕೀಯ ತಂತ್ರಗಾರಿಕೆ ಅಗತ್ಯ ಇದೆ. ಪಕ್ಷ ಸಂಘಟನೆಯಲ್ಲಿ ಕೆಲ ಬದಲಾವಣೆ ತನ್ನಿ. ಸರ್ಕಾರ, ಪಕ್ಷ ವೇಗವಾಗಿ ಹೋಗಬೇಕು, ಇಲ್ಲ ಅಂದ್ರೆ 2023 ನಮಗೆ ಕಷ್ಟ. ಸಿದ್ದರಾಮೋತ್ಸವದಲ್ಲಿನ ಜನ ವೋಟ್ ಆಗಿ ಕನ್ವರ್ಟ್ ಆದ್ರೆ ಬಿಜೆಪಿಗೆ ದೊಡ್ಡ ಲಾಸ್. ನಿನ್ನೆಯ ಜನರನ್ನು ನಾನು ನಿರೀಕ್ಷೆ ಮಾಡಿರಲಿಲ್ಲ, ಸಿದ್ದರಾಮಯ್ಯ ಕೂಡ ನಿರೀಕ್ಷೆ ಮಾಡಿರಲಿಲ್ಲ ಅನ್ಸುತ್ತೆ. ಹಾಗಾಗಿ ಇದು ನಮಗೆ ಆಲರಾಂ ಆಗ್ಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಳಿಕ ಈ ಕಡೆ ಗಮನ ಹರಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹರಿದ ಧ್ವಜಗಳನ್ನು ಹಾರಿಸಬೇಕಾ? ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ವಾ?: ಮುತಾಲಿಕ್

ಯಡಿಯೂರಪ್ಪ ಭೇಟಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಅವರನ್ನು ಭೇಟಿ ಮಾಡಿದ್ರು. ಕರಾವಳಿಯ ಸರಣಿ ಕೊಲೆ ಪ್ರಕರಣಗಳು, ಪ್ರವೀಣ್ ಕೊಲೆಗೆ ಬಿಜೆಪಿ ಕಾರ್ಯಕರ್ತರ ಆಕ್ರೋಶ ಬೆಳವಣಿಗೆಗಳ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕಾರ್ಯಕರ್ತರೇ ನಮ್ಮ ಆಸ್ತಿ. ಕಾರ್ಯಕರ್ತರನ್ನು ಕೆರಳಿಸಿದ್ರೆ ಹುಷಾರ್ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತ ರಾಜೀನಾಮೆ ಬಗ್ಗೆ ಕೆಲ ನಾಯಕರ ಮಾತುಗಳಿಗೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲ ನಾಯಕರ ವರ್ತನೆ ಬಗ್ಗೆ ಕಿಡಿಕಾರಿದ್ದಾರಂತೆ. ನಮ್ಮದು ನಂಬರ್ 1 ಕೇಡರ್ ಬೇಸ್ ಪಾರ್ಟಿ, ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭ. ಕಾರ್ಯಕರ್ತರನ್ನು ಕೆರಳಿಸುವ ಕೆಲಸ ಮಾಡಿದ್ರೆ ಹುಷಾರ್. ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವತ್ತ ಗಮನ ಕೊಡಿ ಎಂದು ಸಿಎಂಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾಹೈ ಬೊಮ್ಮಾಯಿ ಜೀ?- CMಗೆ ಅಮಿತ್ ಶಾ ಫುಲ್ ಕ್ಲಾಸ್

ಬಿಎಸ್‍ವೈ ಬಳಿಕ ಮಾಸ್ ಲೀಡರ್ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಈಗ ಸಿದ್ದರಾಮೋತ್ಸವ ನೋಡಿ ರಾಜಕೀಯ ಆತಂಕ ಉಂಟಾಗಿದ್ದು, ಸಂಘಟನೆಯಲ್ಲಿ ಕೆಲ ಬದಲಾವಣೆಗೆ ಕೇಳಿ ಬಂದಿರುವ ಕೂಗಿಗೆ ಹೈಕಮಾಂಡ್ ನಿಲುವು ಏನು ಎಂಬುದನ್ನು ಕಾದುನೋಡಬೇಕಿದೆ.

Live Tv

Leave a Reply

Your email address will not be published.

Back to top button