ಕೊಪ್ಪಳ: ಜಿಲ್ಲೆಯಲ್ಲಿ ಇಂದು ಏರ್ಪಡಿಸಲಾಗಿದ್ದ ಪಕ್ಷದ ಸಂಘಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯಕರ್ತರ ಮೇಲೆ ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಶಿವ ಚಿತ್ರ ಮಂದಿರದಲ್ಲಿ ನಡೆದ ಸಂಘಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿ ಸಭೆ ನಡೆಸಿದರು. ವಿಧಾನಸಭಾ ಚುನಾವಣೆಗೆ ಮತದಾನ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿ ಪಕ್ಷದ ಪದಾಧಿಕಾರಿಗಳ ಕಾರ್ಯ ಶೈಲಿಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗಾಗಿ ಶಕ್ತಿ ಕೇಂದ್ರ ನಿರ್ಮಾಣ ಮಾಡಿದ್ದೇವೆ. 5 ಬೂತ್ ಗಳಿಗೆ ಒಂದು ಶಕ್ತಿ ಕೇಂದ್ರ ನಿರ್ಮಾಣ ಮಾಡಿದ್ದೇವೆ. ಆದರೆ ಶಕ್ತಿ ಕೇಂದ್ರದಲ್ಲಿ ಇಲ್ಲಿ ತನಕ ಏನು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.
Advertisement
Advertisement
ಅಮಿತ್ ಶಾ ಪ್ರಶ್ನೆಗೆ ತಲ್ಲಣಗೊಂಡ ಜಿಲ್ಲೆಯ ಪದಾಧಿಕಾರಿಗಳು ಪ್ರಶ್ನೆಗೆ ಉತ್ತರಿಸಲಾಗದೆ ಕಸಿವಿಸಿಗೊಂಡರು. ಈ ವೇಳೆ ಮಾತನಾಡಿದ ಅಮಿತ್ ಶಾ, ಇನ್ನೂ ಮುಂದೆ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದನ್ನು ಹೇಳುತ್ತೇನೆ ಎಂದು ಪದಾಧಿಕಾರಿಗಳಿಗೆ ಸೂಚನೆಗಳನ್ನು ನೀಡತೊಡಗಿದರು.
Advertisement
ನಾಳೆಯಿಂದ ಎಲ್ಲಾ ಶಕ್ತಿ ಕೇಂದ್ರದ ಪ್ರಮುಖರು ಕಾರ್ಯಪ್ರವರ್ತರಾಗಬೇಕು. ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಬೈಕ್ ಗಳ ಮುಖಾಂತರ ಬಿಜೆಪಿ ಪಕ್ಷದ ಧ್ವಜ ಹಿಡಿದುಕೊಂಡು ರ‍್ಯಾಲಿ ನಡೆಸಬೇಕು. ಇದಕ್ಕಾಗಿ 2 ದಿನ ಮೀಸಲು ಮಾಡಿ. ಆದರೆ ನೀವು ರೋಡ್ ಶೋ. ಭಾಷಣ ಮಾಡುವುದು ಬೇಡ. ಅದನ್ನು ಮಾಡುವವರು ಬೇರೆಯವರು ಇದ್ದಾರೆ ಎಂದು ತಿಳಿಸಿದರು.
Advertisement
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶಕ್ತಿ ಕೇಂದ್ರ ಮುಖಾಂತರ ಗ್ರಾಮಗಳಲ್ಲಿ ಬಿಜೆಪಿ ಬಗ್ಗೆ ತಿಳಿ ಹೇಳಿ. ಪ್ರತಿ ದಿನ ಪ್ರತಿ ಮನೆಗೆ ಹೋಗಿ ಬಿಜೆಪಿ ಪಕ್ಷದ ಕಾರ್ಯಕ್ರಮಗಳನ್ನು ವಿವರಿಸಿ. ಅಲ್ಲದೇ ಈ ಮುನ್ನ ನಡೆಸಿದ್ದ ಮಿಸ್ ಕಾಲ್ ಅಭಿಯಾನ ಕಾರ್ಯಕ್ರಮದಲ್ಲಿ ಎಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೋ ಆ ಮನೆಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಮತದಾನ ಮಾಡಲು ಮನವಿ ಮಾಡಿ. ಬಳಿಕ ಮತದಾನದ ಮುನ್ನ ದಿನ 12 ಗಂಟೆ ಒಳಗೆ ನಮ್ಮ ಕಾರ್ಯಕರ್ತರ ಮತ ಮತ್ತು ಸಂಬಂಧಿಕರ ಮತವನ್ನು ಹಾಕಿಸಿ ನಮಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.
ಇದುವರೆಗೂ ನೀವು ಶಕ್ತಿ ಕೇಂದ್ರದಲ್ಲಿ ಏನು ಮಾಡಿಲ್ಲ. ನಾಳೆಯಿಂದ ನಾನು ಹೇಳಿದ್ದನ್ನು ಮಾಡುತ್ತೀರಾ? ಕೈ ಎತ್ತಿ ಎಂದು ಹೇಳಿದರು. ಅಮಿತ್ ಶಾ ಅವರ ಮಾತಿಗೆ ತಲೆದೂಗಿದ ಪದಾಧಿಕಾರಿಗಳು ಅವರ ಸೂಚನೆಯಗಳನ್ನು ಪಾಲಿಸುವುದಾಗಿ ತಿಳಿಸಿ ಕೈ ಎತ್ತಿದರು.
ಈ ವೇಳೆ ಗಂಗಾವತಿಯ ಶಕ್ತಿ ಕೇಂದ್ರದ ಪ್ರಮುಖರೊಬ್ಬರು, ಬಿಜೆಪಿ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಶಾಸಕ ಅನ್ಸಾರಿ ಗುಂಡಾ ಕೇಸ್ ಹಾಕಿಸುತ್ತಿದ್ದಾರೆ ಎಂದಾಗ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದ ಅಮಿತ್ ಶಾ, ಯಾವುದೇ ಪೊಲೀಸ್ ಅಧಿಕಾರಿಗಳು ನಿಮ್ಮ ತಪ್ಪಿಲ್ಲದೇ ತೊಂದರೆ ಕೊಟ್ಟರೆ ನನಗೆ ತಿಳಿಸಿ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಳಿಕ ನಿಮ್ಮ ಮೇಲೆ ದಾಖಲು ಮಾಡಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡುವುದಾಗಿ ಭರವಸೆ ನೀಡಿದರು.