ಬೆಂಗಳೂರು: ಇಂದಿನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರಾಹುಲ್ ಪ್ರವಾಸದ ವೇಳೆ ಮೈಸೂರಿನ ಸುತ್ತೂರು ಮಠ ಮತ್ತು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರಲಿಲ್ಲ. ಆದ್ರೆ ಅಮಿತ್ ಶಾ ಮಠಗಳಿಗೆ ಭೇಟಿ ನೀಡುವ ಮೂಲಕ ರಾಹುಲ್‍ಗೆ ಪರೋಕ್ಷವಾಗಿ ತಿರುಗೇಟು ನೀಡಲಿದ್ದಾರೆ.
ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ, ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಮೂಲಕ ಪ್ರವಾಸ ಆರಂಭಿಸಲಿದ್ದಾರೆ. ಈ ಮೂಲಕ ಕರುನಾಡು ಜಾಗೃತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಿದ್ದಗಂಗಾ ಮಠ ಸೇರಿದಂತೆ ಲಿಂಗಾಯತ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 9.40ಕ್ಕೆ ಅಮಿತ್ ಶಾ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 11ಕ್ಕೆ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.20ಕ್ಕೆ ಶಿವಮೊಗ್ಗದ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ, 2.45ಕ್ಕೆ ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಾಣಿಜ್ಯೋದ್ಯಮಿಗಳ ಜೊತೆ ಸಂವಾದ, ಶಿವಮೊಗ್ಗದ ಬೆಕ್ಕಿನ ಕಲ್ಮಠಕ್ಕೆ ಭೇಟಿ, ಶಿವಮೊಗ್ಗದಲ್ಲಿ ರೋಡ್ ಶೋ ಬಳಿಕ ಈಶ್ವರಪ್ಪ ನಿವಾಸದಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಡಿನ್ನರ್ ಹೆಸರಲ್ಲಿ ಭಿನ್ನಮತ ಶಮನಕ್ಕೆ ಅಮಿತ್ ಷಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Advertisement
ಮಂಗಳವಾರದಂದು ದಾವಣಗೆರೆಯಲ್ಲಿ ಮುಷ್ಠಿಧಾನ್ಯ ಸಂಗ್ರಹ ಅಭಿಯಾನದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಜೊತೆಗೆ ನಾಳೆ ಮಧ್ಯಾಹ್ನ ದಾವಣಗೆರೆಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಚಿತ್ರದುರ್ಗದ ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಮಠ, ಮುರಘಾರಾಜ ಮಠಗಳಿಗೆ ಭೇಟಿ ನೀಡಿ, ಸಂಜೆ ಚಳ್ಳಕೆರೆಯಲ್ಲಿ ಎಸ್‍ಟಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.