ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ಕಾಯುತ್ತಿದ್ದಾರೆ; ಜೆಡಿಎಸ್‌ಗೆ ಮತ ಕೊಟ್ರೆ ಕಾಂಗ್ರೆಸ್‌ಗೆ ಕೊಟ್ಟಂತೆ – ಅಮಿತ್ ಶಾ

Public TV
5 Min Read
amit shah

ಬೀದರ್‌: ವಿಜಯ ಸಂಕಲ್ಪ ಯಾತ್ರೆಯು (Vijaya Sankalpa Yatra) ಬಡವರ ಕಲ್ಯಾಣದ ಸಂಕಲ್ಪವನ್ನು ಹೊಂದಿದೆ. ಇದು ರಾಜ್ಯದ ವಿಕಾಸದ ಸಂಕಲ್ಪದ ಯಾತ್ರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶುಕ್ರವಾರ ವಿಶ್ಲೇಷಿಸಿದರು.

ಬೀದರ್ (Bidar) ಜಿಲ್ಲೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಯಾತ್ರೆಯು ಕಲ್ಯಾಣ ಕರ್ನಾಟಕದ ವಿವಿಧ ಕಡೆ ಸಂಚರಿಸಲಿದೆ. ಈ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಇದನ್ನೂ ಓದಿ: ಒಬ್ಬ ವ್ಯಕ್ತಿ ತಪ್ಪು ಮಾಡಿದ್ರೆ ಅದು ಪಕ್ಷಕ್ಕೆ ಹೇಗೆ ಬರುತ್ತದೆ – ಗೋವಿಂದ ಕಾರಜೋಳ ಪ್ರಶ್ನೆ

amit shah1

ರೈಲ್ವೆಯಲ್ಲಿ ಯುಪಿಎ ಸರ್ಕಾರ ಕೊಟ್ಟದ್ದಕ್ಕಿಂತ 9 ಪಟ್ಟು ಹೆಚ್ಚು ಹಣ ಕೊಡಲಾಗಿದೆ. ಲಂಬಾಣಿ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದೇವೆ. ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರಿದ್ದಾರೆ. ಇವರು ಕರ್ನಾಟಕಕ್ಕೆ ಒಳಿತನ್ನು ಕೊಡಲು ಸಾಧ್ಯವೇ? ಕಾಂಗ್ರೆಸ್ ಬಳಿ ಗೆಲುವಿನ ಸೂತ್ರ ಉಳಿದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಕುಸಿಯುತ್ತಿದೆ. ಮೋದಿ ಅವರ ಸಾವಿಗಾಗಿ ಘೋಷಣೆ ಕೂಗುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಟೀಕೆಯಿಂದ ಕಮಲ ಇನ್ನಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ. ವಿಕಾಸದ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ. ಮೋದಿಜಿ ಸಾವನ್ನು ಬಯಸುವ ಕಾಂಗ್ರೆಸ್ಸಿಗರ ಸೋಲಿಗೆ ಕಲ್ಯಾಣ ಕರ್ನಾಟಕದ ಜನತೆ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.

ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ಬಿಜೆಪಿ, ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಿದೆ. ಗರಿಷ್ಠ ಹಣವನ್ನೂ ಈ ಭಾಗಕ್ಕೆ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರ್ಕಾರವು ಕಾಂಗ್ರೆಸ್ ಎಟಿಎಂ ಆಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ಜೆಡಿಎಸ್‍ಗೆ ಕೊಡುವ ಮತ ಸಂಪೂರ್ಣ ಹಾಳಾಗುತ್ತದೆ. ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ. ತುಕ್ಡೇ ತುಕ್ಡೇ ಗ್ಯಾಂಗ್ ಬೆಂಬಲಿಸುವ, ಆತಂಕವಾದಕ್ಕೆ ಬೆಂಬಲ ಕೊಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡದಿರಿ ಎಂದು ತಿಳಿಸಿದರು.

bjp bidar program

10 ಕೋಟಿ ಶೌಚಾಲಯ ನೀಡಿದ್ದು, 13 ಕೋಟಿ ಜನರಿಗೆ ಸಿಲಿಂಡರ್, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ, ಉಚಿತ ಕೋವಿಡ್ ಲಸಿಕೆ ನೀಡಲಾಗಿದೆ. ಉಚಿತ ವಿಮೆ, ಆರೋಗ್ಯ ರಕ್ಷಣೆ ಸಹ ಒದಗಿಸಲಾಗಿದೆ. ದೇಶದ ರಕ್ಷಣೆಗಾಗಿ 370ನೇ ವಿಧಿಯನ್ನು ರದ್ದು ಮಾಡಲಾಯಿತು. ಕಾಂಗ್ರೆಸ್ ಮತ ಬ್ಯಾಂಕ್ ಪರವಾಗಿದೆ. ನಾವು ಮತಬ್ಯಾಂಕಿನ ಕಡೆ ಗಮನ ಕೊಡುತ್ತಿಲ್ಲ. ನಮಗೆ ದೇಶದ ಸುರಕ್ಷತೆ ಮುಖ್ಯ. ರಾಮಮಂದಿರ ಬೇಕಿತ್ತೇ ಅಥವಾ ಬೇಡವಾಗಿತ್ತೇ? ಮಂದಿರ ವಿಚಾರವನ್ನು ವಿಳಂಬ ಮಾಡಿದ್ದೇ ಕಾಂಗ್ರೆಸ್. ಆದರೆ ಮೋದಿಜಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಕಾಶಿ, ಕೇದಾರನಾಥ, ಸೋಮನಾಥ ಮಂದಿರದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಟಿಕೆಟ್ ಹೊಸಬರಿಗೆ ಫಿಕ್ಸ್?

ರಸ್ತೆ, ವಿಮಾನ ನಿಲ್ದಾಣ, ನಲ್ಲಿ ನೀರಿನ ಸಂಪರ್ಕ, ಶಿಕ್ಷಣ ಕ್ಷೇತ್ರ, ನೀರಾವರಿಗೆ ಗರಿಷ್ಠ ಹಣ ನೀಡಿದ್ದೇವೆ. ನಮ್ಮ ಕ್ಲಿನಿಕ್ ಸೇರಿ ಮನೆ, ಮನೆಗೆ ನೀರಿನ ಸೌಕರ್ಯ ಕೊಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ಮೋದಿಜಿ- ಯಡಿಯೂರಪ್ಪ ಸರ್ಕಾರ ಹಣ ನೀಡಿತು. ಜಗಜ್ಯೋತಿ ಬಸವೇಶ್ವರರು ಪ್ರಜಾಪ್ರಭುತ್ವದ ಸಂದೇಶ ನೀಡಿದರು. ಮೋದಿಜಿ ಗೌರವಪೂರ್ಣವಾಗಿ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ- ಬೊಮ್ಮಾಯಿ ಅವರು ಇಲ್ಲಿನ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಕಾರಣಕರ್ತರು ಪ್ರಧಾನಿ ಮೋದಿಜಿ. ಅಮಿತ್ ಶಾ ಅವರು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದರು. ದೇಶದ ಆರ್ಥಿಕ ಸ್ಥಿತಿಯನ್ನು ಸರಿ ದಾರಿಗೆ ತಂದು ದೇಶವನ್ನು ಮುನ್ನಡೆಸಿದವರು ಮೋದಿಜಿ. ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿದ್ದರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿತ್ತು. ಸಾವಿರಾರು ಸಾವು ಆಗುತ್ತಿತ್ತು. ಆದರೆ ಮೋದಿಜಿ ಅಧಿಕಾರದಲ್ಲಿ ಇದ್ದ ಕಾರಣ ಹಾಗಾಗಲಿಲ್ಲ ಎಂದು ವಿವರಿಸಿದರು.

bjp program

ದೇಶದ ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕಲು 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ, 2024ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರ ಪಡೆಯಬೇಕಿದೆ. ಬಿಜೆಪಿಗೆ ಮತ ಹಾಕಿ; ಮತ ಹಾಕಿಸಿ ಎಂದು ಮನವಿ ಮಾಡಿದರಲ್ಲದೇ, ಸಾಲದ ಹೊರೆ ಕೊಟ್ಟದ್ದು ಕಾಂಗ್ರೆಸ್. ಜನರಿಗೆ ಮೋಸ ಮಾಡುವುದು, ಸುಳ್ಳು, ಭ್ರಷ್ಟಾಚಾರ ಎಂದರೆ ಅದು ಕಾಂಗ್ರೆಸ್. ಜಾತಿ, ಮತಗಳನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಹಿನ್ನಡೆಗೆ ಕಾಂಗ್ರೆಸ್ ಕಾರಣ. ನೈಜ ಸಾಮಾಜಿಕ ನ್ಯಾಯವನ್ನು ಬಿಜೆಪಿ ಮೀಸಲಾತಿ ಮೂಲಕ ಕೊಟ್ಟಿದೆ. ಇದು ಕಾಂಗ್ರೆಸ್ ಹೊಟ್ಟೆಯಲ್ಲಿ ತಳಮಳಕ್ಕೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ನೀಡಲಾಗುತ್ತಿದೆ. ನಮ್ಮದು ಜನಸಮಸ್ಯೆಗೆ ಸ್ಪಂದಿಸುವ ಸರ್ಕಾರ. ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸದಿಂದ ನುಡಿದರು. ಇದನ್ನೂ ಓದಿ: ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಫರ್ ಬರಲಿಲ್ಲ: ಸೋಮಶೇಖರ್ ಸ್ಪಷ್ಟನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yediyurappa) ಮಾತನಾಡಿ, 4 ರಥಗಳು 224 ಕ್ಷೇತ್ರಗಳಿಗೆ ಭೇಟಿ ಕೊಡಲಿವೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ ಬೃಹತ್ ಸಭೆ ನಡೆಯಲಿದೆ. ಮಹಾನ್ ನಾಯಕ ನರೇಂದ್ರ ಮೋದಿಜಿ ಅವರು ಬರಲಿದ್ದಾರೆ. ಬಸವ ಕಲ್ಯಾಣ ಹೇಗಿತ್ತು? ಇವತ್ತು ಸಾವಿರಾರು ಕೋಟಿ ಹಣದಿಂದ ಹೇಗೆ ಅಭಿವೃದ್ಧಿ ಆಗಿದೆ ಎಂದು ಗಮನಿಸಿ. ಮೋದಿಜಿ, ಅಮಿತ್ ಶಾಜಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅದಕ್ಕೆ ನಿಮ್ಮ ಬೆಂಬಲ ಇರಲಿ ಎಂದರಲ್ಲದೆ, ಕಾಂಗ್ರೆಸ್‍ನ ಹಣ, ತೋಳು ಬಲದ ಮೂಲಕ ಗೆಲ್ಲುವುದು ತಿರುಕನ ಕನಸಷ್ಟೇ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಬಸವಣ್ಣನ ಕರ್ಮಭೂಮಿಯಿಂದ ಈ ಯಾತ್ರೆ ಆರಂಭವಾಗಿದೆ. ಇದಕ್ಕೆ ಬಸವಣ್ಣನ ಪ್ರೇರಣೆ ಇದೆ. ಬಸವ ಕಲ್ಯಾಣವು ಜನರ ಆಕರ್ಷಣೆಯ ಕೇಂದ್ರಬಿಂದು. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ನರೇಂದ್ರ ಮೋದಿಜಿ ಅವರ ಸಾಧನೆಗಳನ್ನು ಜಗತ್ತೇ ಕೊಂಡಾಡುತ್ತಿದೆ.‌ ಕೋವಿಡ್ ನಿಯಂತ್ರಣದ ಮಹತ್ವದ ಕಾರ್ಯವನ್ನು ನಮ್ಮ ಪ್ರಧಾನಿ ಮೋದಿಜಿ ಮಾಡಿದ್ದಾರೆ. 140 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದಾರೆ. ಶ್ರೀಲಂಕಾ- ಪಾಕಿಸ್ತಾನಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆ. ಪಾಕ್ ಜನತೆ ಮೋದಿಜಿ ಅವರಂಥ ನಾಯಕತ್ವ ಬಯಸುತ್ತಿದ್ದಾರೆ. ದೇಶದ ಸಾಧನೆ, ದೇಶ, ರಾಜ್ಯಗಳ ಅಭಿವೃದ್ಧಿಯನ್ನು ಗಮನಿಸಿ ಮತ್ತೆ ಬಿಜೆಪಿ ಆಡಳಿತಕ್ಕೆ ಅವಕಾಶ ಕೊಡಬೇಕೆಂದು ವಿನಂತಿಸಿದರು. ಇದನ್ನೂ ಓದಿ: ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ- ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಸಚಿವ ಬಿ.ಶ್ರೀರಾಮುಲು, ರಾಜ್ಯದ ಸಹ ಉಸ್ತುವಾರಿ ಡಿ.ಕೆ.ಅರುಣಾ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಪ್ರಭು ಚೌಹಾಣ್, ಸಂಸದ ಉಮೇಶ್ ಜಾಧವ್, ಶಾಸಕ ರಘುನಾಥ ಮಲ್ಕಾಪುರೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಶಾಸಕ ಶರಣು ಸಲಗರ್, ಶಾಸಕರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *