ನವದೆಹಲಿ: ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು (New Criminal Law) ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿವೆ. ಅಪರಾಧ ಮತ್ತು ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ʻಸ್ವದೇಶಿʼ ಆಗಿ ಪರಿವರ್ತಿಸಿವೆ. ಈ ಕಾನೂನುಗಳು ಸಂವಿಧಾನ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶ್ಲಾಘಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಹೊಸ ಕಾನೂನುಗಳ ಜಾರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ 77 ವರ್ಷಗಳ ಬಳಿಕ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಸ್ವದೇಶಿ ಆಗಿದೆ. ಇದನ್ನು ಸಾಧ್ಯವಾಗಿಸಲು ಸಹಕಾರ ನೀಡಿದ ದೇಶದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದಿದ್ದಾರೆ.
ದಂಡದ ಬದಲಿಗೆ ನ್ಯಾಯ:
ಮಹಿಳೆಯರು ಮತ್ತು ಮಕ್ಕಳು (Women And Childrens) ಸೇರಿದಂತೆ ಅನೇಕ ಸಮುದಾಯಗಳಿಗೆ ಹೊಸ ಕಾನೂನು ಪ್ರಯೋಜನ ಒದಗಿಸುತ್ತದೆ. ದಂಡ ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದವರಿಗೆ ಶಿಕ್ಷೆಯಾಗಲಿದೆ, ತ್ವರಿತ ವಿಚಾರಣೆಯೊಂದಿಗೆ ಜನರಿಗೆ ತ್ವರಿತವಾಗಿ ನ್ಯಾಯ ಸಿಗಲಿದೆ. ಮೊದಲು ಪೊಲೀಸರ ಹಕ್ಕುಗಳನ್ನು (Police Rights) ರಕ್ಷಿಸಲಾಗುತ್ತಿತ್ತು. ಈಗ ಸಂತ್ರಸ್ತರು ಹಾಗೂ ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ. ಹೊಸ ಕಾನೂನಿನಲ್ಲಿ ಸಂವಿಧಾನ ಆಶಯಕ್ಕೆ ಅನುಗುಣವಾಗಿ ಹಲವು ವಿಭಾಗಗಳು ಮತ್ತು ಅಧ್ಯಾಯಗಳನ್ನು ವರ್ಗೀಕರಿಸಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಹೊಸ ಕಾನೂನುಗಳು ಸಂತ್ರಸ್ತರನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಹಿಂದೆಲ್ಲಾ ಪೊಲೀಸರು ಯಾರನ್ನಾದರೂ ಬಂಧಿಸಿದರೆ ಕುಟುಂಬಸ್ಥರು ಕೋರ್ಟ್‌ಗೆ ಹೋಗಬೇಕಿತ್ತು. ಆದ್ರೆ ಈಗ ಪ್ರತಿ ಠಾಣೆಯಲ್ಲೂ ರಿಜಿಸ್ಟರ್ ಮತ್ತು ಇ-ರಿಜಿಸ್ಟರ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಹಾಗಾಗಿ ಪೊಲೀಸರು ವಶದಲ್ಲಿರುವ ಆರೋಪಿಗಳನ್ನು ಮತ್ತು ಅಪರಾಧಿಗಳನ್ನು ಪಟ್ಟಿ ಮಾಡಬೇಕಾಗುತ್ತದೆ. ಜೊತೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕಾಗುತ್ತದೆ. ಇದರಿಂದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಗಾ ವಿರುದ್ಧ ಕೆಂಡಾಮಂಡಲ:
ನಂತರ ರಾಹುಲ್ ಗಾಂಧಿ ಭಾಷಣದ ಮಧ್ಯೆ ಮಾತನಾಡಿದ ಅಮಿತ್ ಶಾ, ವಿಪಕ್ಷ ನಾಯಕರು ಈ ರೀತಿ ಮಾತನಾಡಬಾರದು. ಅಭಯದ ಬಗ್ಗೆ ಮಾತನಾಡುವ ನೈತಿಕತೆ ಇವರಿಗಿಲ್ಲ. ಈ ದೇಶವನ್ನು ಆತಂಕಕ್ಕೆ ದೂಡಿದವರು, ತುರ್ತು ಪರಿಸ್ಥಿತಿ ಹೇರಿದವರು. ಅಭಯದ ಬಗ್ಗೆ ಮಾತನಾಡುತ್ತಾರೆ. ಮೊದಲ ಭಾಷಣದಲ್ಲಾದರೂ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಾಲ ಎನ್‌ಡಿಎ-ಇಂಡಿಯಾ ಒಕ್ಕೂಟ ನಾಯಕರ ನಡುವೆ ಗದ್ದಲ ಶುರುವಾಯಿತು. ಈ ವೇಳೆ ಈಶ್ವರನ ಫೋಟೋ ಪ್ರದರ್ಶಿಸಿದ ರಾಗಾ ವಿರುದ್ಧ ಶಾ ಆಕ್ರೋಶ ಹೊರಹಾಕಿದರು.