– ಏ. 25ರ ಬಳಿಕ ಮೋದಿ ಎಂಟ್ರಿ
ನವದೆಹಲಿ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಬೆನ್ನಲ್ಲೇ ಪ್ರಚಾರದ ಕಾವು ಹೆಚ್ಚಿಸಲು ಬಿಜೆಪಿ (BJP) ಹೈಕಮಾಂಡ್ ತೀರ್ಮಾನಿಸಿದೆ. ಇದರ ಭಾಗವಾಗಿ ಏಪ್ರಿಲ್ 21 ಮತ್ತು 22 ರಂದು ದಾವಣಗೆರೆ (Davanagere) ಮತ್ತು ದೇವನಹಳ್ಳಿಯಲ್ಲಿ (Devanahalli) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರೋಡ್ ಶೋ (Road Show) ನಡೆಸಲಿದ್ದಾರೆ. ಈಗಾಗಲೇ ಚುನಾವಣೆ ಅಖಾಡಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಧುಮುಕಿದ್ದು ಇದರ ಬೆನ್ನಲ್ಲೇ ಶಾ ಹಾಗೂ ಮೋದಿ ಜೋಡಿ ಕಮಾಲ್ ಮಾಡಲು ಸಿದ್ಧವಾಗಿದೆ.
ಏಪ್ರಿಲ್ 21-23 ರವರೆಗೆ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿರಲಿದ್ದು ಇಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಮತ್ತು ಕೆಲವು ಪ್ರಮುಖ ಮಠಾಧೀಶರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ ಅಮಿತ್ ಶಾ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದು ಪ್ರಚಾರದ ಕಾರ್ಯತಂತ್ರ ಹೆಣೆಯಲಿದ್ದಾರೆ.
ಅಮಿತ್ ಶಾ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅಖಾಡಕ್ಕೆ ಇಳಿಯಲಿದ್ದು ಏಪ್ರಿಲ್ 25ರ ಬಳಿಕ ಸುಮಾರು 15-20 ರೋಡ್ ಶೋ, ಸಮಾವೇಶ, ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ 7 ಬಾರಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದು ಆ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ. ಈ ಪ್ರಚಾರದಲ್ಲಿ ಬಂಡಾಯ ನಾಯಕರ ಕ್ಷೇತ್ರಗಳು ಪ್ರಮುಖವಾಗಿರಲಿವೆ ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ: ಜನರಲ್ಲಿ ಸುದೀಪ್ ಮನವಿ
ಕರಾವಳಿ ಕರ್ನಾಟಕ, ಹುಬ್ಬಳ್ಳಿ ಸೇರಿದಂತೆ ಇತರೆ ಹಿಂದುತ್ವದ ಒಲವಿರುವ ಪ್ರದೇಶಗಳಲ್ಲಿ ಯೋಗಿ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಿದ್ದು ಈ ಭಾಗದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಲಿದ್ದಾರೆ. ಈ ದಿನಾಂಕಗಳು ಇನ್ನೆರಡು ದಿನಗಳಲ್ಲಿ ಚುನಾವಣೆ ಆಯೋಗಕ್ಕೆ ಸಲ್ಲಿಕೆಯಾಗಲಿದೆ. ಇದನ್ನೂ ಓದಿ: ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್