ಹುಬ್ಬಳ್ಳಿ: ಜನವರಿ 18ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಮಾವೇಶಕ್ಕೆ ಹತ್ತಾರು ಮರಗಳನ್ನ ಕಡಿದು ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಹತ್ತಾರು ಮರಗಳ ಟೊಂಗೆ ಕಡಿಯಬೇಕಾದ ಪಾಲಿಕೆ ಸಿಬ್ಬಂದಿ ಮರಗಳನ್ನ ಕಡಿದು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಗೃಹ ಸಚಿವ ಅಮಿತ್ ಶಾ ಅವರಿಗೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ತೊಡಕಾಗುತ್ತದೆ ಎಂದು ನೆಹರು ಮೈದಾನದಕ್ಕೆ ಹೊಂದಿಕೊಂಡಿರುವ ಕೊಪ್ಪಿಕರ ರಸ್ತೆಯ ಬಳಿಯ ಗಿಡಮರಗಳ ಟೊಂಗೆ ಕಡಿಯಲು ಪಾಲಿಕೆಗೆ ಸೂಚಿಸಿದ್ದರು. ಆದರೆ ಪಾಲಿಕೆ ಸಿಬ್ಬಂದಿ ಟೊಂಗೆಗಳನ್ನ ಕಡಿಯದೆ ಮರಗಳನ್ನೇ ನೆಲಕ್ಕೆ ಉರುಳಿಸಿದ್ದಾರೆ.
Advertisement
ಮರ ಕಡಿದಿದ್ದಕ್ಕೆ ಸಚಿವರು ಗರಂ:
ಅಮಿತ್ ಶಾ ಕಾರ್ಯಕ್ರಮದ ಭದ್ರತೆಗಾಗಿ ಮರಗಳನ್ನ ಕಡಿದು ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿಟ್ಟಾಗಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳನ್ನ ತರಾಟೆಗೆ ತಗೆದುಕೊಂಡಿದ್ದಾರೆ. ಮರಗಳನ್ನ ಕಡಿದಿದ್ದು ಯಾರು? ಅವರಿಗೆ ಸೂಚನೆ ಕೊಟ್ಟವರು ಯಾರು? ಎಂದು ಪ್ರಲ್ಹಾದ ಜೋಶಿ ಪಾಲಿಕೆ ಆಯುಕ್ತರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮರಗಳನ್ನ ಕಡಿದಿರುವ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ.