ಕರ್ನಾಟಕ ಗೆಲ್ಲಲು ಮಂತ್ರಾಲೋಚನೆ – ಚುನಾವಣೆ ತಂತ್ರ ಬದಲಿಸಿದ ಅಮಿತ್ ಶಾ

Public TV
2 Min Read
Amit shah 1

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಚಾಣಕ್ಯ ಅಮಿತ್ ಶಾ ಇಂದು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ರಾಜ್ಯದ ನಾಯಕರಿಗೆ ಕಟ್ಟುನಿಟ್ಟಿನ ಪಾಠ ಮಾಡಿದ್ದಾರೆ.

ಚುನಾವಣೆಗಾಗಿ ಹೊಸ ಟಾಸ್ಕ್ ಜಾರಿಗೆ ತಂದಿರುವ ಅಮಿತ್ ಶಾ ಬೇರೆ ಬೇರೆ ಮೂರು ತಂಡಗಳನ್ನು ರಚಿಸಿ, ಅವುಗಳ ಉಸ್ತುವಾರಿಯನ್ನು ಮೂವರು ಕೇಂದ್ರ ಸಚಿವರಿಗೆ ವಹಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಅಮಿತ್ ಶಾ ಭೇಟಿ ಬಳಿಕ ರಾಜ್ಯದಲ್ಲಿ ಅಂದರೆ ಜನೆವರಿ 1, 2 ಮತ್ತು 3 ರವರೆಗೆ ರಾಷ್ಟ್ರೀಯ ವಕ್ತಾರ ಜೆ.ವಿ.ಎಲ್.ನರಸಿಂಹರಾವ್, ಮಾಹಿತಿ ಮತ್ತು ತಂತ್ರಜ್ಞಾನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವಿಯಾ ಮತ್ತು ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವಡೇಕರ್ ವಾಸ್ತವ್ಯ ಹೂಡಲಿದ್ದಾರೆ.

ಸಭೆಯಲ್ಲಿ ಟಿಕೆಟ್ ಗೊಂದಲ ಉಂಟಾಗಿದ್ದು, ಅದು ಹೈಕಮಾಂಡ್ ತೀರ್ಮಾನ ಅಂತಾ ಖಡಕ್ ಉತ್ತರವನ್ನು ಅಮಿತ್ ಶಾ ನೀಡಿದ್ದಾರೆ. ರಾಜ್ಯದಲ್ಲಿ ಯಾವ ನಾಯಕರು ಅಭ್ಯರ್ಥಿ ಘೋಷಣೆ ಮಾಡುವ ಹಾಗಿಲ್ಲ. ಸಭೆಯಲ್ಲಿ ನಡೆದಂತಹ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಆಗದಂತೆ ಎಚ್ಚರವಹಿಸಬೇಕು. ಪಕ್ಷದ ಕಾರ್ಯಕಾರಿಣಿ ಸಭೆಗಳ ನಂತರ ಯಾರು ಮಾತುಕತೆಯನ್ನು ಗೌಪ್ಯವಾಗಿ ಇರಿಸತಕ್ಕದು. ಬೂತ್ ಸಶಕ್ತೀಕರಣ, ವಿಸ್ತಾರಕರ ಗ್ರೌಂಡ್ ರಿಪೋರ್ಟ್ ಅನುಗುಣವಾಗಿ ಕಾರ್ಯಚಟುವಟಿಕೆ ರೂಪಿಸಬೇಕು ಅಂತಾ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ ಅಂತಾ ತಿಳಿದು ಬಂದಿದೆ.

Amit shah 2

ಇನ್ನೂ ಬಿಜೆಪಿ ದುರ್ಬಲವಿರುವ ಕ್ಷೇತ್ರಗಳಲ್ಲಿ ಗೆಲ್ಲಲು ಅಮಿತ್ ಶಾ 12 ಅಂಶಗಳನ್ನು ಸಭೆಯಲ್ಲಿ ತಿಳಿಸಿದ್ದಾರೆ. ಎಲ್ಲ ನಾಯಕರಿಗೂ 12 ಅಂಶಗಳನ್ನು ಬರೆದುಕೊಳ್ಳುವಂತೆ ಸೂಚಿಸಿದ್ದಾರೆ. ನಾನು ಇಲ್ಲಿ ಬಂದಿರೋದು ಸುಮ್ಮನೆ ಕುಳಿತುಕೊಳ್ಳಲು ಅಲ್ಲ. ಕರ್ನಾಟಕದ ಚುನಾವಣೆಯನ್ನು ಗೆಲ್ಲಲು ಬಂದಿದ್ದೇನೆ. ಶೇ. 45ರಷ್ಟು ಮುಸ್ಲಿಂ ಬಾಹ್ಯವುಳ್ಳ ರಾಜ್ಯದಲ್ಲಿ ವಿಜಯ ಪತಾಕೆಯನ್ನು ಈಗಾಗಲೇ ಹಾರಿಸಿದ್ದೇವೆ. ಹಿಂದೂ ಪ್ರಾಬಲ್ಯವಿರುವ ಕರ್ನಾಟಕದಲ್ಲಿ ಗೆಲ್ಲುವುದು ಅಷ್ಟು ಕಷ್ಟದ ಕೆಲಸವಲ್ಲ. ನಿಮಗೆ ಕೆಲಸ ಮಾಡೋದಕ್ಕೆ ಆಗದಿದ್ರೆ ಹೇಳಿ ನಾನೇ ಜಿಲ್ಲೆಗೆ ಬಂದು ಕೂರ್ತೀನಿ ಅಂತಾ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ.

ಕೋರ್ ಕಮಿಟಿ ಸಭೆಯ ಬಳಿಕ ಅಮಿತ್ ಶಾ ಇಂದು ರಾತ್ರಿ 8 ಗಂಟೆಗೆ ದೆಹಲಿಗೆ ತೆರಳಿದ್ದಾರೆ. ಜನೆವರಿ 09ಕ್ಕೆ ಮತ್ತೆ ಬೆಂಗಳೂರಿಗೆ ಅಮಿತ್ ಶಾ ಆಗಮಿಸಲಿದ್ದು, ಇಲ್ಲಿ ಸಭೆ ನಡೆಸಿದ ಬಳಿಕ ಚಿತ್ರದುರ್ಗಕ್ಕೆ ತೆರಳಲಿದ್ದಾರೆ.

https://www.youtube.com/watch?v=p0ITIHZlweU

Share This Article
Leave a Comment

Leave a Reply

Your email address will not be published. Required fields are marked *