ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಮುಂದಾಗಿದ್ದಾರೆ ಎನ್ನುವ ಸೂಚನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಗೌಬಾ ಅವರೊಂದಿಗೆ ಸಭೆ ನಡೆಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಭಯೋತ್ಪಾದಕರ ದಾಳಿ ಬೆದರಿಕೆ ಹಿನ್ನಲೆ ಇತ್ತೀಚೆಗಷ್ಟೇ ಕಾಶ್ಮೀರದ ಕಣಿವೆಗೆ 35 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶುಕ್ರವಾರ ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿದೆ. ಅಲ್ಲದೆ, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ರಾಜ್ಯವನ್ನು ತೊರೆಯುವಂತೆ ಸೂಚನೆ ನೀಡಿದೆ.
Advertisement
Advertisement
ಈ ಹಿನ್ನೆಲೆ ಸಾವಿರಾರು ಅಮರನಾಥ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಕಾಶ್ಮೀರವನ್ನು ತೊರೆದಿದ್ದಾರೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಶೇ.95ರಷ್ಟು ಅಂದರೆ ಸುಮಾರು 20 ಸಾವಿರಕ್ಕೂ ಅಧಿಕ ಭಾರತ ಹಾಗೂ ವಿದೇಶಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಶುಕ್ರವಾರದ ವೇಳೆಗೆ ಕಾಶ್ಮೀರ ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್(ಬಿಎಟಿ) ಹಾಗೂ ಭಯೋತ್ಪಾದಕರ ಗುಂಪುಗಳು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದವು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಕಮಾಂಡೋಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
Advertisement
ಕಳೆದ 36 ಗಂಟೆಗಳಲ್ಲಿ ಪಾಕಿಸ್ತಾನ ಭಯೋತ್ಪಾದಕರನ್ನು ಕಾಶ್ಮೀರದೊಳಗೆ ನುಗ್ಗಿಸಲು ಭಾರೀ ಪ್ರಯತ್ನ ನಡೆಸಿತ್ತು ಎಂದು ಭಾರತೀಯ ಸೇನೆ ತಿಳಿಸಿದೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮಂಗಳವಾರ ಮಾತನಾಡಿ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ಸರ್ಕಾರ ಪ್ರಮುಖ ನಿರ್ಧಾರ ಕೈಗೊಳ್ಳಲಿದೆ ಎಂಬ ವದಂತಿಗೆ ಯಾರೂ ಕಿವಿಗೊಡಬೇಡಿ ಎಂದು ಹೇಳಿದ್ದರು. ರಾಜ್ಯದ ರಾಜಕೀಯ ಪಕ್ಷಗಳು ಆಡಳಿತದಲ್ಲಿ ಅಸಮಾಧಾನ ಉಂಟು ಮಾಡಿ, ಪರಿಸ್ಥಿತಿ ತಿಳಿಗೊಳಿಸಲು ಕೇಂದ್ರ ಸರ್ಕಾರದ ಮೊರೆ ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದರು.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕಾರಣಕ್ಕೆ ಆಗಸ್ಟ್ 5 ರಿಂದ 7ರವರೆಗೆ ಕಡ್ಡಾಯವಾಗಿ ಕಲಾಪದಲ್ಲಿ ಹಾಜರಾಗಬೇಕೆಂದು ಬಿಜೆಪಿ ತನ್ನ ಎಲ್ಲ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ವಿಪ್ ಜಾರಿಗೊಳಿಸಿದೆ ಎನ್ನುವ ಚರ್ಚೆ ಈಗ ದೇಶದೆಲ್ಲೆಡೆ ಆರಂಭವಾಗಿದೆ.