Connect with us

ಮಿಷನ್ 150 ದಾಟಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್- ಆ ’40’ ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ನಡೆಯುತ್ತಾ?

ಮಿಷನ್ 150 ದಾಟಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್- ಆ ’40’ ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ನಡೆಯುತ್ತಾ?

ಬೆಂಗಳೂರು: ಭಾನುವಾರ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ರಾಜ್ಯದಲ್ಲಿ ಬಿರುಗಾಳಿಯ ರಾಜಕಾರಣ ಆರಂಭವಾಗುವ ಲಕ್ಷಣ ಕಾಣ್ತಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಲ್ಲಾ ಪಕ್ಷಗಳು ಸಕ್ರಿಯವಾಗಿವೆ. ಇತ್ತ ಚುನಾವಣಾ ಚಾಣಕ್ಯ ಎಂದು ಕರೆಸಿಕೊಳ್ಳುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಮಿಷನ್ 150 ಪ್ಲಸ್ ದಾಟಲು ಮಾಸ್ಟರ್ ಗೇಮ್ ಮಾಡ್ತಿದ್ದಾರೆ.

ಏನದು ಮಾಸ್ಟರ್ ಪ್ಲಾನ್?: ಅಮಿತ್ ಶಾ 150 ಕ್ಷೇತ್ರಗಳಲ್ಲಿ ಜಯ ಗಳಿಸಲು ಉತ್ತರ ಪ್ರದೇಶ ಮಾಡೆಲ್ ತಂತ್ರಗಳನ್ನು ಬಳಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಕಾಂಗ್ರೆಸ್ ಮುಸ್ಲಿಂ ಮತಗಳನ್ನು ಒಡೆಯುವ ಪ್ರಾದೇಶಿಕ ಪಕ್ಷ ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮುಸ್ಲಿಂ ಮತಗಳನ್ನು ಛಿದ್ರಗೊಳಿಸಿ ಕಾಂಗ್ರೆಸ್‍ಗೆ ಶಾಕ್ ಕೊಡಲು ಬಿಜೆಪಿ ಚುನಾವಣಾ ತಂತ್ರಗಳನ್ನು ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ.

ಆ 40 ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು: ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 120 ಕ್ಷೇತ್ರಗಳಲ್ಲಿ ಗೆಲವು ಪಡೆಯಲಿವೆ ಎಂಬ ಗುಪ್ತಚರ ಮಾಹಿತಿಗಳು ಅಮಿತಾ ಶಾ ಕೈ ತಲುಪಿವೆ. ಆದ್ರೆ ಮಿಷನ್ 150 ಪೂರ್ಣ ಮಾಡಲು ಮುಸ್ಲಿಂ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಉತ್ತರಪ್ರದೇಶ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷದಿಂದ 90 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ರು. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರ ಈ ನಿರ್ಣಯದಿಂದ ಮುಸ್ಲಿಂ ಮತಗಳ ವಿಂಗಡನೆ ಆಗಿತ್ತು.

ಮಾಯಾವತಿಯವರ ನಿರ್ಧಾರದಿಂದ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಂಪರ್ ಗೆಲವು ಸಿಕ್ಕಿತ್ತು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ರು. ಜೆಡಿಎಸ್ ಜೊತೆ ಒಳ ಒಪ್ಪಂದ ಮಧ್ಯಸ್ಥಿಕೆಯನ್ನು ಪ್ರಭಾವಿ ಒಕ್ಕಲಿಗರು ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಕರ್ನಾಟಕದಲ್ಲಿಯೂ ಅಮಿತ್ ಶಾ ಇದೇ ರಣತಂತ್ರಗಳನ್ನು ಪ್ರಯೋಗಿಸಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಯೋಚನೆ ಮಾಡುತ್ತಿದ್ದಾರೆ.

ಹಾಗಾದ್ರೆ ಆ 40 ಕ್ಷೇತ್ರಗಳು ಯಾವವು?: ಈಗಾಗಲೇ ಅಮಿತ್ ಶಾ ಮುಸ್ಲಿಂ ಪ್ರಾಬಲ್ಯವಿರುವ 40 ಕ್ಷೇತ್ರಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ 5 ಕ್ಷೇತ್ರ, ಮೈಸೂರು, ಕಲಬುರಗಿ ಜಿಲ್ಲೆಯಲ್ಲಿ ತಲಾ 2 ಕ್ಷೇತ್ರ, ಬೀದರ್, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಧಾರವಾಡ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ತಲಾ 1 ಕ್ಷೇತ್ರ ಹೀಗೆ ರಾಜ್ಯಾದ್ಯಂತ ಒಟ್ಟು 40 ಕ್ಷೇತ್ರಗಳ ಪಟ್ಟಿಯನ್ನು ಅಮಿತಾ ಶಾ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

ಈ 40 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ಒಪ್ಪಿಕೊಳ್ಳುತ್ತಾ ಅಥವಾ ಕಾಂಗ್ರೆಸ್ ಆರೋಪಿಸುವಂತೆ ಎಂಐಎಂ ಪಕ್ಷದ ಅಸಾವುದ್ದೀನ್ ಓವೈಸಿ ಜೊತೆ ಕೈ ಮಿಲಾಯಿಸುತ್ತದೆಯಾ ಅಥವಾ ಏಕಾಂಗಿಯಾಗಿಯೇ ಚುನಾವಣಾ ರಣರಂಗಕ್ಕೆ ಎಂಟ್ರಿ ನೀಡುತ್ತಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.