ಬೆಂಗಳೂರು: ಬಿಜೆಪಿಯ ನಂಬರ್ 2 ನಾಯಕ ಅಮಿತ್ ಶಾ ರಾಜ್ಯ ಭೇಟಿ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದು ಹಲವು ಸುದ್ದಿಗಳಿಗೆ ರೆಕ್ಕೆ ಪುಕ್ಕ ಬಂದಿದೆ.
ಅವಧಿಪೂರ್ವ ಚುನಾವಣೆ, ಸಂಪುಟ ಪುನಾರಚನೆ, ರಾಜ್ಯ ಘಟಕದಲ್ಲಿ ಬದಲಾವಣೆ.. ಹೀಗೆ ಹಲವು ವಿಚಾರಗಳು ಮುನ್ನೆಲೆಗೆ ಬಂದಿದೆ. ಸಂಜೆ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಚುನಾವಣಾ ತಯಾರಿ ಸೇರಿ ಹಲವು ವಿಚಾರಗಳ ಬಗ್ಗೆ ಗಹನ ಚರ್ಚೆ ನಡೆದಿದೆ.
ಅಮಿತ್ ಶಾ ಪ್ರತಿಯೊಬ್ಬರಿಂದ ಅಭಿಪ್ರಾಯ ಸಂಗ್ರಹ ಮಾಡ್ತಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತ್ರ, ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಏಪ್ರಿಲ್ 13 ರಿಂದ ಮೂರು ಹಂತದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಕಟೀಲ್ ತಿಳಿಸಿದ್ದಾರೆ.
ಸಿಟಿ ರವಿ ಮಾತನಾಡಿ, ರಾಜ್ಯದಲ್ಲಿ ಅವಧಿಗೂ ಮುನ್ನವೇ ವಿಧಾನ ಸಭೆ ಚುನಾವಣೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ 150 ಸ್ಥಾನಕ್ಕಿಂತ ಒಂದು ಸ್ಥಾನವೂ ಕಡಿಮೆ ಬರಬಾರದು: ರಾಹುಲ್ ಗಾಂಧಿ
ಪಂಜರಾಜ್ಯಗಳ ಚುನಾವಣೆಯ ಪೈಕಿ 4 ರಾಜ್ಯಗಳನ್ನು ಗೆದ್ದ ಬಳಿಕ ಹೈಕಮಾಂಡ್ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಈ ವರ್ಷದ ಅಂತ್ಯದಲ್ಲಿ ಗುಜರಾತ್ ಜೊತೆ ಕರ್ನಾಟಕದಲ್ಲಿ ಚುನಾವಣೆ ನಡೆದರೆ ಹೇಗೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಈಗಾಗಲೇ ವಿರೋಧ ಪಕ್ಷಗಳು ಅವಧಿಪೂರ್ವ ಚುನಾವಣೆ ನಡೆಸಲು ಬಿಜೆಪಿ ಮುಂದಾಗುತ್ತಿದೆ ಎಂದು ಆರೋಪಿಸಿ ಹೇಳಿಕೆ ನೀಡುತ್ತಿವೆ.