ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

Public TV
4 Min Read
AMITSHAH 1

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬೇಕೆಂದು ಬಿಜೆಪಿ (BJP) ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಕಬ್ಜ ಮಾಡುವ ಉದ್ದೇಶದಿಂದ ಸ್ವತಃ ಬಿಜೆಪಿಯ ಮಾಸ್ಟರ್ ಮೈಂಡ್ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಖಾಡಕ್ಕೆ ಧುಮುಕಿದ್ದಾರೆ. ನಾಳೆ ಮಂಡ್ಯದಲ್ಲಿ (Mandya) ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಈ ಸಂಬಂಧ ಭರ್ಜರಿ ತಯಾರಿ ಮಾಡಿಕೊಂಡಿದೆ.

ಸದ್ಯ ಬಿಜೆಪಿ ಕರ್ನಾಟದಲ್ಲಿ (Karnataka) ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಗೆದ್ದು ಸಂಪೂರ್ಣ ಬಹುಮತಗಳ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಬೇಕೆಂದರೆ ಹಳೆ ಮೈಸೂರು ಭಾಗದಲ್ಲಿ‌ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಹೀಗಾಗಿ ಬಿಜೆಪಿ ಹಳೆ ಮೈಸೂರು ಭಾಗದ ಮೇಲೆ ಹೆಚ್ಚು ಗಮನವರಿಸುತ್ತಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೆ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕೆಂದರೆ ಬಿಜೆಪಿ ಹಲವು ಮಾಸ್ಟರ್ ಪ್ಲ್ಯಾನ್ ಮಾಡುವುದು ಅನಿವಾರ್ಯ ಆಗಿದೆ. ಇದೀಗ ಆ ಮಾಸ್ಟರ್ ಪ್ಲಾನ್ ಮಾಡಲು ಬಿಜೆಪಿಯ ಚಾಣಕ್ಯ ಎಂದು ಬಿರುದು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಖಾಡಕ್ಕೆ ಧುಮಿಕಿದ್ದಾರೆ. ನಾಳೆ ಮಂಡ್ಯದಲ್ಲಿ ಅಮಿತ್ ಶಾ ಅವರನ್ನು ಕರೆಸಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

MANDYA FLEX 2

ನಾಳೆ ಮಂಡ್ಯ ನಗರಕ್ಕೆ ಕೇಂದ್ರ ಗೃಹ ಸಚಿವ ಆಗಮಿಸಲಿದ್ದು, ಬೆಳಗ್ಗೆ 11 ಗಂಟೆಗೆ ಮದ್ದೂರಿನ ಭೈರಾಪಟ್ಟಣದ ಹೆಲಿಪ್ಯಾಡ್‌ಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಬಳಿಕ 11.15ಕ್ಕೆ ಗೆಜ್ಜಲಗೆರೆಯಲ್ಲಿರುವ ಮನ್‌ಮುನ್‌ನ ಮೆಗಾ ಡೈರಿಯನ್ನು ಉದ್ಘಾಟಿಸಿ ಬಳಿಕ ಅಲ್ಲೇ ಊಟ ಮಾಡಲಿದ್ದಾರೆ. ಇದಾದ ಬಳಿಕ ಮತ್ತೆ ಭೈರಾಪಟ್ಟಣದ ಹೆಲಿಪ್ಯಾಡ್‌ನಿಂದ ಮಂಡ್ಯ ನಗರದ ಪಿಇಎಸ್ ಕಾಲೇಜಿನ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ‌ ಆಗಮಿಸಿ 1.30ಕ್ಕೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಪುಟದ ಹಲವು ಸಚಿವರು ಭಾಗಿಯಾಗಲಿದ್ದಾರೆ.

ನಾಳೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿಯ ಸಂಕಲ್ಪ ಯಾತ್ರೆಗೆ ಬೃಹತ್ ವೇದಿಯನ್ನು ಸಿದ್ಧಪಡಿಸಲಾಗಿದೆ. ಈ ಬೃಹತ್ ಸಮಾವೇಶದಲ್ಲಿ 1 ಲಕ್ಷ ಮಂದಿಯನ್ನು ಸೇರಿಸುವ ಗುರಿಯನ್ನು ಬಿಜೆಪಿ ಮುಖಂಡರು ಹೊಂದಿದ್ದು, ಈ ಸಂಬಂಧ ಮಂಡ್ಯ ವಿವಿ ಆವರಣದಲ್ಲಿ ಜರ್ಮನ್ ಟೆಂಟ್‌ನಿಂದ ಸುಸರ್ಜಿತ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸಮಾವೇಶಕ್ಕೆ ಬರುವ ಎಲ್ಲಾ ಜನರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವ ಹಿನ್ನೆಲೆ ಇಡೀ ಮಂಡ್ಯ‌ ನಗರ ಕೇಸರಿ ಮಯವಾಗಿ ಕಂಗೊಳಿಸುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬಿಜೆಪಿ ಬಾವುಟ, ಅಮಿತ್ ಶಾ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಹಾಕಿ‌ ಶೃಂಗಾರ ಮಾಡಲಾಗಿದೆ. ಇನ್ನೂ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರ ಅಮಿತ್ ಶಾ ಅವರ ಸ್ವಾಗತ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಅಮಿತ್ ಶಾಗೆ Z+ ಸೆಕ್ಯೂರಿಟಿ ಇರುವ ಕಾರಣ ಎಸ್‌ಪಿಜಿ ಹಾಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿಕೊಂಡಿದೆ.

MANDYA FLEX

ಒಂದು ಕಡೆ ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವುದು ಬಿಜೆಪಿ ವಲಯದಲ್ಲಿ ಸಂತಸ ಮನೆ ಮಾಡಿದರೆ, ಇನ್ನೊಂದೆಡೆ ಅಮಿತ್ ಶಾಗೆ ರೈತರ ಪ್ರತಿಭಟನೆ ಬಿಸಿ ಮುಟ್ಟುವ ಸಾಧ್ಯತೆ ಇದೆ. 53 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಹೋರಾತ್ರಿ ಧರಣಿ‌ ಮಾಡುತ್ತಿದ್ದಾರೆ.‌ ಅಮಿತ್ ಶಾ ಮಂಡ್ಯಗೆ ಬರುತ್ತಿರುವ ಕಾರಣ ನಿನ್ನೆ ಏಕಾಏಕಿ ಪೊಲೀಸರು ಅಹೋರಾತ್ರಿ ಧರಣಿಯ ಟೆಂಟ್‌ ಅನ್ನು ಧ್ವಂಸ ಮಾಡಿದ ಕಾರಣ ರೈತರು ಪೊಲೀಸರ ವಿರುದ್ಧ ಆಕ್ರೋಶ ಪಡಿಸಿದ ಕಾರಣ ಮತ್ತೆ ಟೆಂಟ್‌ನ್ನು ಪೊಲೀಸರು‌ ನಿರ್ಮಾಣ ಮಾಡಿದರು. ಇದೀಗ ರೈತರು ನಮ್ಮ ಬೇಡಿಕೆಗಳನ್ನು ಅಮಿತ್ ಶಾ ಮುಂದೆ ಇಡಬೇಕು, ನಮಗೆ ಅಮಿತ್ ಶಾ ಭೇಟಿಗೆ ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಅಮಿತ್ ಶಾ ಗೋ ಬ್ಯಾಕ್ ಚಳುವಳಿ ಮಾಡುವುದಾಗಿ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!

MANDYA FLEX 1

ಒಟ್ಟಾರೆ ಮುಂದಿನ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಇಟ್ಟುಕೊಂಡು ಮಂಡ್ಯಗೆ ಅಮಿತ್ ಶಾ ಬರುತ್ತಿರುವುದು ಬಿಜೆಪಿಗೆ ಶಕ್ತಿ ತುಂಬಿದ್ರೆ, ಇನ್ನೊಂದೆಡೆ ಪೊಲೀಸರು ಮಾಡಿರುವ ಯಡವಟ್ಟಿನಿಂದ ಅನ್ನದಾತರು ಅಮಿತ್ ಶಾಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಕಾಯುತ್ತಿದ್ದಾರೆ. ಆದ್ರೆ ಅಮಿತ್ ಶಾ ರೈತರ ಭೇಟಿಗೆ ಅವಕಾಶ ನೀಡಿ ತಮ್ಮ ರಾಜಕೀಯ ಚಾಣಾಕ್ಷತನದಿಂದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ‌ ಕಮಾಲ್‌ಗೆ ಕಾರಣರಾಗುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ರಾಜ್ಯಕ್ಕೆ ಚುನಾವಣಾ ಚಾಣಕ್ಯ – ಬಿಜೆಪಿಯಲ್ಲಿ ಮಂದಹಾಸ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *