ಬೆಂಗಳೂರು: ಸಚಿವ ಸಂಪುಟ ರಚನೆಗೆ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಉದ್ದವಿದ್ದ ಲಿಂಗಾಯತರ ಪಟ್ಟಿಗೆ ಕತ್ತರಿ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಚಿವ ಸಂಪುಟ ಪಟ್ಟಿಯಲ್ಲಿದ್ದ ಐದು ಲಿಂಗಾಯತ ನಾಯಕರಿಗೆ ಮಾತ್ರ ಮಣೆ ಹಾಕಲಾಗಿದೆ. ಅದರಲ್ಲೂ ಹಿರಿಯರಿಗೆ ಮಾತ್ರ ಮಂತ್ರಿಗಿರಿ ನೀಡಲು ಅಮಿತ್ ಶಾ ನಿರ್ಧರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಲಿಂಗಾಯತ ಶಾಸಕರಿಗೆ ಬಿಗ್ ಶಾಕ್ ಉಂಟಾಗಿದೆ.
Advertisement
Advertisement
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಶಾಸಕ ಜಗದೀಶ್ ಶೆಟ್ಟರ್, ಗೋವಿಂದರಾಜ ನಗರದ ಶಾಸಕ ವಿ.ಸೋಮಣ್ಣ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಹಾಗೂ ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಅವರು ಲಿಂಗಾಯತ ಸಮುದಾಯದ ನಾಯಕರಾಗಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Advertisement
ಎಸ್ಸಿ/ಎಸ್ಟಿ ಸಮುದಾಯಕ್ಕೆ ಬಂಪರ್!
ಬಿ.ಎಸ್.ಯಡಿಯೂರಪ್ಪ ಅವರ ಕ್ಯಾಬಿನೆಟ್‍ನಲ್ಲಿ ಲಿಂಗಾಯತರಿಗಿಂತ ಎಸ್‍ಸಿ-ಎಸ್‍ಟಿಗೆ ಹೆಚ್ಚು ಸಚಿವ ಸ್ಥಾನ ಸಾಧ್ಯತೆ ಇದೆ. ಪಕ್ಷೇತರ ನಾಗೇಶ್ ಸೇರಿದಂತೆ 6 ಮಂದಿಗೆ ಮಂತ್ರಿಗಿರಿ ಪಕ್ಕಾ ಆಗಿದ್ದು, ಎಸ್‍ಸಿಗೆ 4 ಹಾಗೂ ಎಸ್‍ಟಿಗೆ 2 ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ.
Advertisement
ಎಸ್‍ಸಿ ಕೋಟಾದಲ್ಲಿ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್, ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ, ಮುಧೋಳದ ಶಾಸಕ ಗೋವಿಂದ ಕಾರಜೋಳ ಹಾಗೂ ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಎಸ್‍ಟಿ ಕೋಟಾದಲ್ಲಿ ಮೊಳಕಾಳ್ಮೂರು ಶಾಸಕ ಶ್ರೀರಾಮುಲು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ನೀಡಲು ನಿರ್ಧರಿಸಲಾಗಿದೆ.
ಹಿಂದುಳಿದ ವರ್ಗದ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ, ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಾಗೂ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮಂತ್ರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇಬ್ಬರು ಒಕ್ಕಲಿಗರಿಗಷ್ಟೇ ಮಂತ್ರಿ ಭಾಗ್ಯ!
ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಒಕ್ಕಲಿಗರೇ ಹೆಚ್ಚಾಗಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಇಬ್ಬರು ಒಕ್ಕಲಿಗ ಶಾಸಕರಿಗಷ್ಟೇ ಮಂತ್ರಿ ಭಾಗ್ಯ ಸಿಗಲಿದೆ. ಈ ಪಟ್ಟಿಯಲ್ಲಿ ಆರ್.ಅಶೋಕ್ ಹಾಗೂ ಅಶ್ವಥ್‍ನಾರಾಯಣ್ ಇದ್ದಾರೆ. ಈ ಮೂಲಕ ಆಪರೇಷನ್ ಕಮಲದ ಆಪರೇಟರ್ ಗೆ ಬಿಜೆಪಿ ಹೈಕಮಾಂಡ್ ಮಂತ್ರಿಗಿರಿ ಬಂಪರ್ ಆಫರ್ ನೀಡಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಬ್ರಾಹ್ಮಣ ಕೋಟಾದಲ್ಲಿ ಸುರೇಶ್ ಕುಮಾರ್, ಕೊಡವ ಕೋಟಾದಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಲು ಅಮಿತ್ ಶಾ ಸೂಚನೆ ನೀಡಿದ್ದಾರಂತೆ. ಆದರೆ ಬಿಎಸ್‍ವೈ ಆಪ್ತರಾದ ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಸಚಿವ ಸ್ಥಾನದಿಂದ ಸಿ.ಟಿ. ರವಿ ಅವರನ್ನು ಹೊರಗಿಟ್ಟಿರುವ ಅಮಿತ್ ಶಾ ಅವರು, ಬಿಜೆಪಿಯಲ್ಲಿ ಉನ್ನತ ಸ್ಥಾನ ನೀಡಲು ಚಿಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.