ಮಂಡ್ಯ: ಸಂವಾದ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಿಲ್ಲ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಈ ಮೂಲಕ ನೆರೆದ ಜನರ ಮೆಚ್ಚುಗೆಗೆ ಪಾತ್ರರಾದ್ರು.
ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ನಗರದ ವಿಶ್ವೇಶರಯ್ಯ ಕ್ರೀಡಾಂಗಣದಲ್ಲಿ ಸಾವಯವ ಕೃಷಿಕರು, ರೈತ ಮಹಿಳೆಯರ ಜೊತೆ ಅಮಿತ್ ಶಾ ಅವರ ಸಂವಾದವನ್ನು ಏರ್ಪಡಿಸಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ಶಾ ತಡವಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ಲಿ ಕ್ಷಮೆ ಕೇಳಿದ್ದಾರೆ.
ಸಾವಯವ ಕೃಷಿಗೆ ಮೋದಿ ಸರ್ಕಾರ ಸಾಕಷ್ಟು ಹಣ ಮೀಸಲಿಟ್ಟಿದೆ. ಯುಪಿಎ ಸರ್ಕಾರಕ್ಕಿಂತ 75% ರಷ್ಟು ಹೆಚ್ಚು ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡುತ್ತಿದೆ. ಜಗತ್ತಿನಲ್ಲಿಯೇ ಜೈವಿಕ ಕೃಷಿಕರ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬೇಕು. ಸಾವಿರಾರು ವರ್ಷದಿಂದ ದೇಶದಲ್ಲಿ ಅವೈಜ್ಞಾನಿಕವಾಗಿ ಸಾವಯವ ಕೃಷಿ ಮಾಡಲಾಗುತ್ತಿದೆ ಅಂತ ವಿದೇಶಿಗರು ಹೇಳ್ತಾರೆ. ಆದ್ರೆ ವೈಜ್ಞಾನಿಕವಾಗಿ ದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಮೂರೂವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಪರಂಪರಾಗತ ಕೃಷಿ ಯೋಜನೆಯಡಿ 7.50 ಲಕ್ಷ ಹೆಕ್ಟೆರ್ ಅಭಿವೃದ್ಧಿಗೊಳಿಸಿದೆ. ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿಯೂ ಸಾವಯವ ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಸಿಕ್ಕಿಂನ್ನು ಸಂಪೂರ್ಣವಾಗಿ ಸಾವಯವ ಕೃಷಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂತ ಅಮಿತ್ ಶಾ ಸಂವಾದದಲ್ಲಿ ತಿಳಿಸಿದ್ರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ರೈತರಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು. ಮಾದರಿ ರೈತರನ್ನು ಇಸ್ರೇಲ್ ಗೆ ಕಳುಹಿಸ್ತೇವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ರೀತಿ ನಾವು ಮಾಡ್ತೇವೆ. ಸಿದ್ದರಾಮಯ್ಯ ಏನೂ ಮಾಡಿಲ್ಲ, ಸಾವಯವ ಕೃಷಿ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಗೋ ಹತ್ಯೆಯನ್ನು ನಿಲ್ಲಿಸಬೇಕಿದೆ. ಗೋವುಗಳಿಂದ ಬರುವ ಉತ್ಪನ್ನಗಳ ಬಳಕೆ ಸೂಕ್ತ ರೀತಿಯಲ್ಲಿ ನಡೆಯಬೇಕಿದೆ. ಈಗಾಗಲೇ ಕೇಂದ್ರ ಸರ್ಕಾರ ಗೋವಿಗೆ ವಿಮೆ ಸೌಲಭ್ಯ ನೀಡಿದೆ ಅಂತ ಹೇಳಿದ್ರು.
ಕಾರ್ಯಕ್ರಮದ ಬಳಿಕ ಅಮಿತ್ ಶಾ, ರೈತ ಮಹಿಳೆಯರೊಂದಿಗೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಸಂವಾದ ಕಾರ್ಯಕ್ರಮದ ಮುಂಭಾಗದಲ್ಲಿ ಸಾಕಷ್ಟು ಖುರ್ಚಿಗಳು ಖಾಲಿ ಇದ್ದಿದ್ದು, ನಾಯಕರಿಗೆ ಮುಜುಗರವನ್ನು ತರಿಸಿದ ಘಟನೆಯೂ ನಡೆಯಿತು.