– ಬಿಜೆಪಿ ಬಳಿ ಇದ್ದಾರಂತೆ 12 ಜನ ಅತೃಪ್ತ ಕಾಂಗ್ರೆಸ್ ಶಾಸಕರು?
ನವದೆಹಲಿ: ಸಂಕ್ರಾಂತಿ ಬಳಿಕ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಲು ಬಿಜೆಪಿ ರಾಷ್ಟ್ರೀಯ ಆಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಬರೋಬ್ಬರಿ 12 ಜನ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ದೆಹಲಿ ಪ್ರವಾಸದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್‍ನ ಅತೃಪ್ತ 12 ಜನ ಶಾಸಕರನ್ನು ಅಮಿತಾ ಶಾ ಅವರಿಗೆ ಭೇಟಿ ಮಾಡಿಸಿದ್ದು, ಮಂಗಳವಾರ ಸತತ ನಾಲ್ಕು ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಸಭೆ ಯಶಸ್ವಿಯಾಗಿದ್ದು, ಸಂಕ್ರಾಂತಿ ಬಳಿಕ ಮೈತ್ರಿ ಸರ್ಕಾರ ಬೀಳಿಸಲು ಪ್ಲಾನ್ ಸಿದ್ಧವಾಗಿದೆ ಎನ್ನಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ಮೂವರು ಶಾಸಕರು, ಬೆಳಗಾವಿ ಜಿಲ್ಲೆಯ ನಾಲ್ವರು ಶಾಸಕರು, ಹಾವೇರಿ ಹಾಗೂ ರಾಯಚೂರು ಜಿಲ್ಲೆಯ ತಲಾ ಒಬ್ಬ ಶಾಸಕರು ಸೇರಿದಂತೆ ಇನ್ನು ಮೂವರು ಶಾಸಕರು ಬಿಜೆಪಿ ಮನೆ ಸೇರಲು ಮುಂದಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಬಿಜೆಪಿ ಹೈಕಮಾಂಡ್ ಕೂಡ ಒಂದು ಹೆಜ್ಜೆ ಮುಂದೆ ಬಂದಿದೆ. ಇದರಿಂದಾಗಿ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಅಧಿಕಾರ ಪಡೆಯಲು ಬಿಜೆಪಿ ನಿರ್ಧರಿಸಿದೆಯಂತೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಬಿಜೆಪಿಯ ಬಲೆಗೆ ಸಿಲುಕಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಸದ್ಯದಲ್ಲಿಯೇ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳು ಸಂಕ್ರಾಂತಿ ಬಳಿಕ ಸತ್ಯವಾಗಲಿದೆಯೇ ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv