ಗದಗ: ಜಿಲ್ಲೆಯಲ್ಲಿ ಬರ ಬೆಂಬಿಡದ ಬೆತಾಳನಂತೆ ಕಾಡುತ್ತಿದೆ. ಜನ ಜಾನುವಾರಗಳು ಹನಿ ನೀರಿಗೂ ತತ್ವಾರ ಪಡುವಂತಾಗಿದೆ. ಆದ್ರೆ ಈ ಭೀಕರತೆಯ ಮಧ್ಯದಲ್ಲಿಯೂ ಭೂಮಿ ಅಗೆದಾಗ ನೀರು ಬರುವ ಮೂಲಕ ಅಲ್ಲೊಂದು ವಿಸ್ಮಯ ನಡೆದಿದೆ.
Advertisement
ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಕೊಪ್ಪ ಗ್ರಾಮದ ಶರಣಪ್ಪ ಬಳೂಟಗಿ ಎಂಬವರ ಜಮೀನಿನಲ್ಲಿ ಸರ್ಕಾರದ ಯೋಜನೆಯಲ್ಲಿ ಕೃಷಿ ಹೊಂಡ ತೆಗೆಸಲು ಮುಂದಾದ ವೇಳೆ ನೀರು ಚಿಮ್ಮಿದೆ. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇಂತಹ ಬರಗಾಲದಲ್ಲಿ ಅದೂ ಸಾವಿರಾರು ಅಡಿ ಬೋರ್‍ವೆಲ್ ಕೊರೆಸಿದ್ರೂ ಹನಿ ನೀರು ಬರದಿರುವ ಸಂದರ್ಭದಲ್ಲಿ ನೀರು ಕಂಡ ಜಮೀನು ಮಾಲೀಕ ಶರಣಪ್ಪ ಹಾಗೂ ಸ್ಥಳೀಯರು ಸಂತಸಗೊಂಡಿದ್ದಾರೆ. ಈ ನೀರು ಕುಡಿಯುವ ನೀರಿನಷ್ಟೇ ಶುದ್ಧವಾಗಿದೆಯಂತೆ. ಹೀಗಾಗಿ ಇನ್ನಷ್ಟು ಅಭಿವೃದ್ದಿಪಡಿಸಿ ಈ ನೀರನ್ನು ಜನರಿಗೆ ಮತ್ತು ಜಾನುವಾರಗಳಿಗೆ ಉಚಿತವಾಗಿ ಕೊಡೋ ಬಯಕೆ ಈ ರೈತರದ್ದು.
Advertisement
Advertisement
ಗದಗ ಜಿಲ್ಲೆ ಹಿರೇಕೊಪ್ಪ ಹಾಗೂ ಸುತ್ತಲಿನ ಗ್ರಾಮದಲ್ಲಿ ಸಾವಿರಾರು ಅಡಿ ಆಳ ಕೊಳವೆ ಬಾವಿ ಕೊರೆಸಿದ್ರೂ ನೀರು ಸಿಗದಂತಾಗಿದೆ. ಇಂಥದ್ರಲ್ಲಿ ಶರಣಪ್ಪ ಅವರ ಜಮೀನಿನಲ್ಲಿ ತೆಗೆಸಿದ ಕೃಷಿ ಹೊಂಡದಿಂದ ನೀರು ಜಿನುಗುತ್ತಿರೋದು ಮಾತ್ರ ನಿಜಕ್ಕೂ ಅಚ್ಚರಿಯ ಸಂಗತಿ. ಇದ್ರಿಂದ ಸಂತಸಗೊಂಡ ರೈತ ಶರಣಪ್ಪ ಹಾಗೂ ಸ್ಥಳೀಯರು ಕೃಷಿ ಹೊಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸಿದ್ರು. ಈ ಸುದ್ದಿ ತಿಳಿದು ಹಿರೇಕೊಪ್ಪ, ಚಿಕ್ಕೊಪ್ಪ, ಬಳೂಟಗಿ, ಬಸಾಪೂರ, ರಾಂಪೂರ, ಗಜೇಂದ್ರಗಡ ಸುತ್ತ ಮುತ್ತಲಿನ ಜನರು ಅಚ್ಚರಿಯಿಂದ ಕೃಷಿ ಹೊಂಡ ವೀಕ್ಷಿಸಲು ಬರ್ತಿದ್ದಾರೆ.
Advertisement
ಈಗಾಗಲೆ ಈ ಕೃಷಿ ಹೊಂಡದ ನೀರು ಕುಡಿಯಲು ಹಾಗೂ ಜಾನುವಾರಗಳಿಗೆ ಉಪಯೋಗವಾಗ್ತಿದೆ. ಭೀಕರ ಬರಗಾಲದಲ್ಲಿ ಕೃಷಿ ಹೊಂಡ ನಿರ್ಮಿಸುವ ವೇಳೆ ನೀರು ಬಂದಿರುವುದು ಕಂಡು ನಿಜಕ್ಕೂ ಆಶ್ಚರ್ಯ ಮೂಡಿಸಿದ್ರೂ ಸತ್ಯ ಅಂತಿದ್ದಾರೆ ನೋಡಲು ಬಂದ ಜನ. ಒಟ್ಟಿನಲ್ಲಿ ಇಂತಹ ಬರಗಾಲದಲ್ಲಿ ಗಂಗೆ ಚಿಮ್ಮಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ. ಈ ಅಂತರ್ ಗಂಗೆ ಹೀಗೆ ಇರಲಿ, ಎಲ್ಲರ ದಾಹ ನಿಗಿಸಲಿ ಅನ್ನೋದು ಜನರ ಆಶಯ.