– ಬಿಜೆಪಿ, ಟಿಎಂಸಿ ಮಧ್ಯೆ ಪೋಸ್ಟ್‌ಕಾರ್ಡ್ ವಾರ್
ಕೋಲ್ಕತ್ತಾ: ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಧ್ಯೆ ಅಂಚೆಪತ್ರ ವಾರ್ ಏರ್ಪಟ್ಟಿದೆ. ಬಿಜೆಪಿಯವರು ‘ಜೈ ಶ್ರೀರಾಮ್’ ಬರೆದರೆ, ಮಮತಾ ಬ್ಯಾನರ್ಜಿ ಅಭಿಮಾನಿಗಳು ‘ಜೈ ಹಿಂದ್’, ‘ಜೈ ಬಂಗಾಳ್’ ಬರೆದು ಮೋದಿಗೆ ಅಂಚೆ ಕಾರ್ಡ್ ಅಭಿಯಾನ ಆರಂಭಿಸಿದೆ.
ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಬರೆದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಪತ್ರಗಳನ್ನು ಕಳುಹಿಸಿದ್ದರು. ಈ ಬೆನ್ನಲ್ಲೇ ಇಂದು ಟಿಎಂಸಿ ಕಾರ್ಯಕರ್ತರು ‘ಜೈ ಹಿಂದ್’, ‘ಜೈ ಬಂಗಾಳ್’ ಹಾಗೂ ‘ವಂದೇ ಮಾತರಂ’ ಎಂದು ಬರೆದು 10 ಸಾವಿರ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.
Advertisement
Advertisement
ಅಂಚೆ ಕಚೇರಿಯ ಮುಂದೆ ಸರದಿ ಸಾಲಿನಲ್ಲಿ ನಿಂತ ನೂರಾರು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈ ಮೂಲಕ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಪತ್ರ ಸಮರ ಜೋರಾಗಿದೆ.
Advertisement
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರ ಪ್ರದೇಶದಲ್ಲಿ ಕಳೆದ ಗುರುವಾರ ಕಾರಿನಲ್ಲಿ ಮಮತಾ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ತಕ್ಷಣವೇ ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ಅವರು, ನನ್ನನ್ನು ಏನು ಎಂದು ತಿಳಿದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತೀರಾ? ನನ್ನ ವಿರುದ್ಧ ಘೋಷಣೆ ಕೂಗಲು ನಿಮಗೆಷ್ಟು ಧೈರ್ಯ? ನಾನಿದನ್ನು ಸಹಿಸಿಸುವುದಿಲ್ಲ. ನಿಮ್ಮ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಕ್ರಮಕೈಗೊಳ್ಳುತ್ತೇನೆ ಎಂದು ಗುಡುಗಿದ್ದರು.
Advertisement
#WATCH North 24 Parganas: West Bengal CM Mamata Banerjee gets off her car and confronts people chanting 'Jai Shri Ram' slogans, Banerjee says'These are all outsiders and BJP people, they are criminals and were abusing me. They are not from Bengal.' pic.twitter.com/haGjQmQYlv
— ANI (@ANI) May 30, 2019
ಪರಿಸ್ಥಿತಿ ಕೈಮಿರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಮಾತಾ ಬ್ಯಾನರ್ಜಿ ಅವರು ಕಾರಿನಿಂದ ಇಳಿದು ಬಂದು ಅಬ್ಬರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ, ಜೈ ಶ್ರೀರಾಮ್ ಎಂದು ಬರೆದು ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಅಂಚೆಪತ್ರ ಕಳುಹಿಸಿತ್ತು.
ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ ಅವರು ಸೋಮವಾರ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಕಚೇರಿ ಬಾಗಿಲು ಮುರಿದು, ಅಲ್ಲಿ ಟಿಎಂಸಿ ಚಿಹ್ನೆ ಬಿಡಿಸಿ ಬಂದಿದ್ದರು.
2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.
ಲೋಕಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಟಿಎಂಸಿಯ ಕೆಲ ಶಾಸಕರು ಹಾಗೂ 50 ಜನ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆ ನಂತರವೂ ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ವಾಗ್ದಾಳಿ, ಅಂಚೆಪತ್ರ ಸಮರ ನಡೆಯುತ್ತಲೇ ಇದೆ.