ಗೆಲುವಿನ ಬೆನ್ನಲ್ಲೇ ಸ್ಮೃತಿ ಇರಾನಿ ಬೆಂಬಲಿಗನ ಕಗ್ಗೊಲೆ

Public TV
1 Min Read
smriti 2

ಅಮೇಥಿ: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಭರ್ಜರಿ ಬಹುಮತದಿಂದ ಗೆಲುವು ಪಡೆದಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಬೆಂಬಲಿಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಸುರೇಂದ್ರ ಸಿಂಗ್ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದು, ಶನಿವಾರ ರಾತ್ರಿ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಸುರೇಂದ್ರ ಅವರ ಮನೆಯ ಬಳಿಯೇ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡುವ ಪ್ರಯತ್ನ ನಡೆಸಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಆದರೆ ಹತ್ಯೆ ಮಾಡಲು ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಂದ್ರ ಸಿಂಗ್ ಅಮೇಥಿಯ ಬರೌಲಿಯಾ ಗ್ರಾಮದವರಾಗಿದ್ದು, ಈ ಗ್ರಾಮವನ್ನು 2015 ರಲ್ಲಿ ಮನೋಹರ್ ಪರಿಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿ ದತ್ತು ಪಡೆದಿದ್ದರು. ಆದರೆ ಬಿಜೆಪಿ ಪರ ಪ್ರಚಾರ ನಡೆಸಲು ಸುರೇಂದ್ರ ಅವರು ಹಳ್ಳಿಯನ್ನ ಬಿಟ್ಟು ಬೇರೆಡೆ ನೆಲೆಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಪರ ನಿರಂತರವಾಗಿ ಪ್ರಚಾರ ನಡೆಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪ್ರಚಾರ ಸಭೆಯ ವೇಳೆ ಸ್ಮೃತಿ ಇರಾನಿ ಅವರು ಸುರೇಂದ್ರ ಅವರ ಕಾರ್ಯವನ್ನು ಹಾಡಿಹೊಗಳಿದ್ದರು. ಸದ್ಯ ಅವರ ಹತ್ಯೆ ಹಿನ್ನೆಲೆಯಲ್ಲಿ ಸುರೇಂದ್ರ ಅವರ ಕುಟುಂಬವನ್ನು ಸಂಜೆ ವೇಳೆಗೆ ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಳೆದ ಮೂರು ದಶಕಗಳಲ್ಲಿ 1998ರಲ್ಲಿ ಹೊರತು ಪಡಿಸಿ ಕಾಂಗ್ರೆಸ್ ಪಕ್ಷ ಅಮೇಥಿಯಲ್ಲಿ ಸೋಲುಂಡಿರಲಿಲ್ಲ. 2004ರ ಬಳಿಕ ರಾಹುಲ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ರಾಹುಲ್‍ರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರಮುಖ ಭಂಗ ಉಂಟು ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *