ಮಂಗಳೂರು: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹಿಂದೂ ಧರ್ಮದ ಪದ್ಧತಿಯನ್ನು ಮೆಚ್ಚಿ ಅಮೆರಿಕದ ಯುವತಿ ಕನ್ನಡಿಗನನ್ನ ಮದುವೆಯಾಗಿದ್ದಾರೆ.
ಅಮೆರಿಕದ ವಧು ಕೆರೊಲಿನ್ ಮಾರ್ಗರೇಟ್ ರೋವ್ಲಿ ಹಾಗೂ ಪುತ್ತೂರಿನ ವರ ವಿಕ್ರಮ್ ಕಾಮತ್ ಮದುವೆಯಾಗಿದ್ದಾರೆ. ಮದುವೆ ಪುತ್ತೂರಿನ ಕಲ್ಲಾರೆಯ ರಘುವಂಶ ನಿವಾಸದಲ್ಲಿ ನಡೆದಿದೆ. ಅಮೆರಿಕದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ವಿಕ್ರಂ ಕಾಮತ್ ಹಾಗೂ ಮಾರ್ಗರೆಟ್ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದರು.
ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಈಗ ಸತಿ- ಪತಿಗಳಾಗಿದ್ದಾರೆ. ಇವರಿಬ್ಬರ ಹಂಬಲದಂತೆ ಹಿಂದೂ ಸಂಪ್ರದಾಯ ಪ್ರಕಾರ ಪುತ್ತೂರಿನಲ್ಲಿ ವಿವಾಹದ ಧಾರ್ಮಿಕ ಕಾರ್ಯಕ್ರಮವನ್ನು ವೇದಮೂರ್ತಿ ದಿವಾಕರ ಭಟ್ ನೆರವೇರಿಸಿಕೊಟ್ಟಿದ್ದಾರೆ. ಮಾರ್ಗರೇಟ್ ರ ಮನೆಯವರು ಅಮೆರಿಕದಲ್ಲೇ ಕುಳಿತು ವೀಡಿಯೋ ಕಾನ್ಫರೆನ್ಸ್ ನಲ್ಲಿ ಮದುವೆ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಮಾರ್ಗರೇಟ್ ರೋವ್ಲಿಯ ಹೆಸರನ್ನು ವಿಶಾಖಾ ಎಂದು ಮರು ನಾಮಕರಣ ಮಾಡಲಾಗಿದೆ.
ಪುತ್ತೂರಿನ ಗೋಪಿಕೃಷ್ಣ ಶೆಣೈ ಹಾಗೂ ರಾಧಿಕಾ ಶೆಣೈ ದಂಪತಿ ಮಾರ್ಗರೇಟ್ ಅವರನ್ನು ಮಗಳಾಗಿ ಸ್ವೀಕರಿಸಿದ್ದು, ಧಾರ್ಮಿಕ ವಿಧಿವಿಧಾನದಂತೆ ಹೊಸ ಹೆಸರು ನಾಮಕರಣ ಮಾಡಿ, ಧಾರೆ ಎರೆದು ಕೊಟ್ಟಿದ್ದಾರೆ. ವಿಕ್ರಂ ಕಾಮತ್ ಬಂಧು-ಮಿತ್ರರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನು ಓದಿ: ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ